ಆಗುಂಬೆ ಘಾಟಿ ಭಾರೀ ವಾಹನ ಸಂಚಾರ ನಿಷೇಧ ತೆರವು
– ಭದ್ರಾವತಿ: ಪಡಿತರ ಅಕ್ಕಿ ಕಳ್ಳ ಸಾಗಣೆ, ಕಠಿಣ ಕ್ರಮಕ್ಕೆ ಪಟ್ಟು
– ಹೊಸನಗರ: ಶಶಿಕಲಾಗೆ ಸಿಎಂ ಕಚೇರಿ ನೆರವು
– ರಿಪ್ಪಿನಪೇಟೆ: ಮರಕ್ಕೆ ನೇಣು ಬಿಗಿದು ಮಹಿಳೆ ಆತ್ಮಹತ್ಯೆ
NAMMUR EXPRESS NEWS
ಶಿವಮೊಗ್ಗ : ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧವನ್ನು ಹಿಂಪಡೆಯಲಾಗಿದೆ. ಈ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ – ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ 6, 7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದ ಸಣ್ಣ ಬಿರುಕು ಕಂಡು ಬಂದಿತ್ತು. ಅಲ್ಲಲ್ಲಿ ರಸ್ತೆ ಕುಸಿತವಾಗಿತ್ತು. ಈ ಹಿನ್ನೆಲೆ ಸೆ.15ರವರೆಗೆ ಭಾರೀ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದರು. ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಸಾರ್ವಜನಿಕರು, ಜನಪ್ರತಿನಿಧಿಗಳ ಕೋರಿಕೆಯನ್ನು ಪರಿಗಣಿಸಲಾಗಿದೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಸಂಚಾರಕ್ಕೆ ಅನುವು ಮಾಡಿ ಆದೇಶಿಸಿದ್ದಾರೆ.
ಪಡಿತರ ಅಕ್ಕಿ ಕಳ್ಳ ಸಾಗಣೆ, ಕಠಿಣ ಕ್ರಮಕ್ಕೆ ಒತ್ತಾಯ
ಭದ್ರಾವತಿ : ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುವವರು ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರ ಶಶಿಕುಮಾರ್ ಗೌಡ ದೂರು ನೀಡಿದ್ದಾರೆ.
ಭದ್ರಾವತಿಯ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ಸಲ್ಲಿಸಿದರು. ಅಕ್ಕಿಯನ್ನು ಅಕ್ರಮವಾಗಿ ಮಾರಾಟ ದಂಧೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅನ್ನುವುದನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೊಸನಗರದ ಶಶಿಕಲಾಗೆ ಸಿಎಂ ಕಚೇರಿ ನೆರವು
ಹೊಸನಗರ : ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಮೇಲಿನ ಸಂಪಳ್ಳಿಯ ಶಶಿಕಲಾ ಅವರ ಸಂಕಷ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವು ನೀಡಿದ್ದಾರೆ. ಕಡುಬಡತನದ ಜೊತೆಗೆ ಅಂಗವೈಕಲ್ಯದಿಂದ ಬಳಲುತ್ತಿರುವ 20 ವರ್ಷದ ಮಗಳ ಜವಾಬ್ದಾರಿಯನ್ನು ಶಶಿಕಲಾ ಅವರು ಹೆಗಲ ಮೇಲೆ ಹೊತ್ತಿದ್ದಾರೆ. ಶಶಿಕಲಾ ಅವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ ಇಲ್ಲದೆ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತವಾಗಿದ್ದರು. ಈ ಸಂಬಂಧ ಪತ್ರಕರ್ತ ರವಿ ಬಿದನೂರು ಅವರು ಸಿಎಂ ಕಚೇರಿಯ ಗಮನ ಸೆಳೆದಿದ್ದರು. ಕೂಡಲೆ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ರಿಪ್ಪನ್ ಪೇಟೆ: ಅರಸಾಳು ರೈಲ್ವೆ ಗೇಟ್ ಬಳಿ ಕೂಲಿ ಕಾರ್ಮಿಕ ಮಹಿಳೆ ಮರಕ್ಕೆ ನೇಣು ಬಿಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಗ್ಯ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ಮಧ್ಯಪ್ರದೇಶದ ದಿಂಡೂರಿ ಜಿಲ್ಲೆಯ ಡಾನ್ಬಿಚೋಯ್ ಗ್ರಾಮದ ಊರ್ಮಿಳಾ ಬಾಯಿ ಮೃತ ಮಹಿಳೆ. ರೈಲ್ವೆ ಹಳಿ ಪಕ್ಕದ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಊರ್ಮಿಳಾ ಬಾಯಿ ತನ್ನ ಪತಿಯೊಂದಿಗೆ ಬಂದಿದ್ದರು. ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೆ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.