ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆ!
– ಹೊಸನಗರ ತಾಲೂಕು ಚಂಪಕಾಪುರದಲ್ಲಿ ಘಟನೆ
– ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕ ಜಾಸ್ತಿ: ಭವಿಷ್ಯ
– ಮದುವೆಗೆ ಒಪ್ಪದ ಕಾರಣ ಪ್ರೇಮಿಗಳ ಆತ್ಮಹತ್ಯೆ!
ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.
ರಾಜೇಶ್ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆ ಪಿಎಸ್ಐ ರಮೇಶ್ ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದರು.
ಶ್ರಾವಣ ಮಾಸದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀ
ಚಿಕ್ಕಬಳ್ಳಾಪುರ: ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕಗಳು ಹೆಚ್ಚಾಗಲಿವೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕೋಡಿ ಮಠದ ಶ್ರೀಗಳು, ಶ್ರಾವಣ ಮಾಸದಲ್ಲಿ ದೇಶದಲ್ಲಿ ಅವಘಡಗಳು ಸಂಭವಿಸಲಿವೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿಯಾಗುವ ಸಾಧ್ಯತೆ ಇದೆ. ಕೋಧಿನಾಮ ಸಂವತ್ಸರ ಆರಂಭವಾಗಿದ್ದು, ದೇಶದಲ್ಲಿ ಜಲ, ಅಗ್ನಿ, ವಾಯು ಕಂಟಕಗಳು ಹೆಚ್ಚಾಗಲಿವೆ ಎಂದು ತಿಳಿಸಿದ್ದಾರೆ.
ಪ್ರೇಮಿಗಳ ಆತ್ಮಹತ್ಯೆ!
ಬಾಗಲಕೋಟೆ: ಮದುವೆಗೆ ಪೋಷಕರು ವಿರೋಧಿಸಿದಕ್ಕೆ ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿದ್ದಾರೆ. ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಘಟನೆ ನಡೆದಿದೆ.
ಸಚಿನ್ ದಳವಾಯಿ, ಪ್ರಿಯಾ ಮಡಿವಾಳರ ಮೃತ ಪ್ರೇಮಿಗಳು. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.