1 ಕೆಜಿಗೆ 2.5 ಲಕ್ಷ ರೂ.ಮಾವಿನ ಹಣ್ಣು..!
– ಕೊಪ್ಪಳಕ್ಕೂ ಬಂತು ಜಪಾನ್ ಮೂಲದ ‘ಮೀಯಾಜಾಕಿ’
– ಏನಿದು ಇದು ಮಾವಿನ ಹಣ್ಣು? ಇಷ್ಟೇಕೆ ಬೆಲೆ..?
NAMMUR EXPRESS NEWS
ಕೊಪ್ಪಳ: ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾದ ಜಪಾನ್ ಮೂಲದ ‘ಮೀಯಾಜಾಕಿ’ ತಳಿ ಈಗ ಕೊಪ್ಪಳದಲ್ಲಿಯೂ ಸದ್ದು ಮಾಡುತ್ತಿದೆ. ಈಗಾಗಲೇ, ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಈ ತಳಿಯ ಹಣ್ಣುಗಳನ್ನು ಬೆಳೆಯಲಾಗಿದೆ. ನಗರದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಮಾವು ಮೇಳದಲ್ಲಿ ಈ ಹಣ್ಣಿನದ್ದೇ ಸುದ್ದಿ. ಏಜೆನ್ಸಿಗಳ ಮೂಲಕ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಂದ ಈ ತಳಿ ರಾಜ್ಯದ ಹಲವು ಕಡೆ ಮಾರಾಟವಾಗಿದೆ. ಒಂದು ಮೀಯಾಜಾಕಿ ತಳಿ ಸಸಿಯ ಬೆಲೆ ₹ 2,500ರಿಂದ ₹ 3,000. ಇದರ ಒಂದು ಕೆ.ಜಿ. ಮಾವಿನ ಹಣ್ಣಿಗೆ 2.50 ಲಕ್ಷ! ಹೀಗಾಗಿ ಇದು ಎಲ್ಲರ ಆಕರ್ಷಣೆ ಕೇಂದ್ರಬಿಂದುವಾಗಿದೆ.
ಕಳೆದ ವರ್ಷದಿಂದ ಈ ಹಣ್ಣು ಸಾಕಷ್ಟು ಸುದ್ದಿ ಮಾಡುತ್ತಿದೆ. ಹಿಂದಿನ ಮಾವು ಮೇಳದಲ್ಲಿ ಮಧ್ಯಪ್ರದೇಶದಿಂದ ಈ ತಳಿಯ ಹಣ್ಣನ್ನು ಮೊದಲ ಬಾರಿಗೆ ಪ್ರದರ್ಶನಕ್ಕೆ ಇರಿಸಲಾಗಿತ್ತು. ಆದರೆ, ಈ ಸಲ ವಿಜಯಪುರ ಜಿಲ್ಲೆಯ ಯುವಕ ಅಷ್ಪಾಕ್ ಪಾಟೀಲ ಎಂಬುವರು ತಮ್ಮ ಮನೆಯ ಕೈ ತೋಟದಲ್ಲಿ ಬೆಳೆದ ಶ್ರೀಮಂತ ಮಾವಿನ ಹಣ್ಣನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಅಷ್ಪಾಕ್ ಬೆಳೆದ ಮೀಯಾಜಾಕಿ ಗಿಡದಲ್ಲಿ ಈಗ 14 ಹಣ್ಣುಗಳು ಬಿಟ್ಟಿದ್ದು ದೊಡ್ಡ ಲಾಭದ ನಿರೀಕ್ಷೆಯಲ್ಲಿದ್ದಾರೆ. ಮುಂಬೈ, ಹೈದರಾಬಾದ್ನಲ್ಲಿ ತಳಿಗೆ ಉತ್ತಮ ಮಾರುಕಟ್ಟೆ ಲಭಿಸುತ್ತದೆ.
ಹಿಂದಿನ ವರ್ಷದ ಮಾವು ಮೇಳದಲ್ಲಿ ಮೀಯಾಜಾಕಿ ಪ್ರದರ್ಶನವಾದ ಬಳಿಕ ಉತ್ತೇಜಿತರಾದ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತರ್ಲಕಟ್ಟಿ ಗ್ರಾಮದ ರಂಗನಾಥ ವಲಮಕೊಂಡಿ ಎಂಬುವವರು ಎಂಟು ತಿಂಗಳು ಹಿಂದೆ 600 ಸಸಿಗಳನ್ನು ನಾಟಿ ಮಾಡಿದ್ದಾರೆ. ಕಡಿಮೆ ಅವಧಿಯಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಉತ್ತಮ ಫಸಲು ಮತ್ತು ಲಾಭ ಸಿಗಬಹುದು ಎನ್ನುವ ನಿರೀಕ್ಷೆ ಹೊಂದಿದ್ದಾರೆ. ‘ಒಂದು ಸಸಿಗೆ ₹ 2,500 ಕೊಟ್ಟು ಖರೀದಿಸಿದ್ದೇನೆ. ಈ ಬಾರಿ ಕೇಸರ್ ಮಾವಿನಹಣ್ಣು ಸಾಕಷ್ಟು ಪ್ರಮಾಣದಲ್ಲಿ ಬೆಳೆದು ಕೆ.ಜಿ.ಗೆ 100ರಿಂದ 150 ಬೆಲೆಗೆ ಮಾರಾಟ ಮಾಡಿದ್ದೇನೆ. ರಾಜ್ಯದ ಮಾರುಕಟ್ಟೆಯಲ್ಲಿ ಮೀಯಾಜಾಕಿ ಅತ್ಯಂತ ಕನಿಷ್ಠವೆಂದರೂ ಕೆ.ಜಿ.ಗೆ ₹1,000 ಮಾರಾಟವಾದರೂ ನನಗೆ ಅದೇ ದೊಡ್ಡ ಲಾಭ’ ಎನ್ನುತ್ತಾರೆ.