ರಾಜ್ಯದಲ್ಲಿ ಕಳೆದ 6 ವರ್ಷಗಳಲ್ಲಿ ಒಟ್ಟೂ 3,364 ಬಾಣಂತಿಯರ ಸಾವು!
– ಮುಖ್ಯಮಂತ್ರಿ ಕಚೇರಿಯಿಂದಲೇ ಅಧಿಕೃತ ಅಂಕಿ ಅಂಶ ಬಿಡುಗಡೆ
– ಶಿಶು ಜನನ ಹಾಗೂ ಮರಣ ಪ್ರಮಾಣ ಹೇಗಿದೆ?
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಆರು ವರ್ಷಗಳಲ್ಲಿ ಒಟ್ಟೂ 3364 ಬಾಣಂತಿಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬಾಣಂತಿಯರು ಹಾಗೂ ಶಿಶು ಮರಣ ಪ್ರಮಾಣ ವಿಚಾರವಾಗಿ ವಿರೋಧ ಪಕ್ಷಗಳ ಆರೋಪದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕಚೇರಿಯಿಂದ ಬಾಣಂತಿಯರ ಸಾವಿನ ಬಗ್ಗೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳ ಸಾವಿನ ಪ್ರಮಾಣಗಳ ಬಗ್ಗೆಯೂ ಇದರಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಯಾವ ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಸಾವುಗಳು ನಡೆದಿವೆ ಹಾಗೂ ಇದಕ್ಕೆ ಕಾರಣಗಳೇನು ಎಂಬ ನಿಟ್ಟಿನಲ್ಲಿ ಅಂಕಿ- ಅಂಶಗಳನ್ನು ನೀಡಲಾಗಿದೆ.
* ಶಿಶು ಜನನ ಹಾಗೂ ಮರಣ ಪ್ರಮಾಣ!
2019ರಲ್ಲಿ 8,94,946 ಶಿಶುಗಳ ಜನನವಾದರೆ, 74 ಶಿಶುಗಳ ಮರಣವಾಗಿದೆ. 2020 ರಲ್ಲಿ 8,52,874 ಶಿಶುಗಳ ಜನನವಾದರೆ, 44 ಶಿಶುಗಳ ಮರಣವಾಗಿದೆ. 2021 ರಲ್ಲಿ 8,76,419 ಶಿಶುಗಳ ಜನನವಾದರೆ, 68 ಶಿಶುಗಳ ಮರಣವಾಗಿದೆ. 2023 ರಲ್ಲಿ 8,10,769 ಶಿಶುಗಳ ಜನನವಾದರೆ, 65 ಶಿಶುಗಳ ಮರಣವಾಗಿದೆ. 2023 ರಲ್ಲಿ 8,13,275 ಶಿಶುಗಳ ಜನನವಾದರೆ, 64 ಶಿಶುಗಳ ಮರಣವಾಗಿದೆ. 2024ರ ನವೆಂಬರ್ ವರೆಗೆ 542183 ಶಿಶುಗಳ ಜನನವಾದರೆ, 44 ಶಿಶುಗಳ ಮರಣವಾಗಿದೆ.