ಬೆಳ್ತಂಗಡಿಯ ಮೂವರು ಕಾರಿನಲ್ಲೇ ಜೀವಂತ ದಹನ!
– ತುಮಕೂರಿನ ಕೆರೆ ಅಂಗಳದಲ್ಲಿ ಸುಟ್ಟ ಕಾರಿನೊಳಗಿತ್ತು ಮೂವರ ಮೃತದೇಹ
– ಅನಾಥ ಕಾರಿನ ರಹಸ್ಯ ಭೇದಿಸಿದ ಪೊಲೀಸರು
– ಇನ್ನು ಇಬ್ಬರು ನಾಪತ್ತೆ: ಘಟನೆ ಕುತೂಹಲ
NAMMUR EXPRESS NEWS
ತುಮಕೂರು: ತುಮಕೂರಿನ ಕುಚ್ಚಂಗಿ ಕೆರೆ ಬಳಿ ಶುಕ್ರವಾರ ಬೆಳಗ್ಗೆ ಸುಟ್ಟು ನಿಲ್ಲಿಸಲಾಗಿದ್ದ ಕಾರಿನೊಳಗೆ ಮೂವರು ವ್ಯಕ್ತಿಗಳ ಮೃತದೇಹ ಪತ್ತೆಯಾಗಿತ್ತು. ಆದರೆ ಈ ಅನಾಥ ಶವಗಳ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಲಭಿಸಿದ್ದು, ಈ ಅನಾಥ ಕಾರಿನ ರಹಸ್ಯ ಕೂಡ ಬಯಲಾಗಿದೆ.
ಆರಂಭದಲ್ಲಿ ಈ ಕಾರು ದಕ್ಷಿಣ ಕನ್ನಡ ಜಿಲ್ಲೆಯ ರಫೀಕ್ ಎಂಬವರಿಗೆ ಸೇರಿದ್ದುಎನ್ನುವುದು ಗೊತ್ತಾಗಿತ್ತು. ಈ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಬೆನ್ನು ಹತ್ತಿದ್ದ ಪೊಲೀಸರಿಗೆ ದೊಡ್ಡ ಶಾಕ್ ಆಗಿದೆ.
ತುಮಕೂರಿನಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿದ್ದ ಮೂರು ಮೃತದೇಹದ ಗುರುತು ಪತ್ತೆಯಾಗಿದೆ. ಕಾರು ಬೆಳ್ತಂಗಡಿಯ ಮದ್ದಡ್ಕ ನಿವಾಸಿ ರಫೀಕ್ಗೆ ಸೇರಿದ್ದು, ಮೃತದೇಹ ಕೂಡ ಬೆಳ್ತಂಗಡಿ ನಿವಾಸಿಗಳದ್ದುಎಂದು ತಿಳಿದುಬಂದಿದೆ.
ಮೃತರನ್ನು ನಡ ಗ್ರಾಮದ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್(45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್(56) &ಶಿರ್ಲಾಲ್ ಗ್ರಾಮದ ನಿವಾಸಿ ಇಮ್ತಿಯಾಜ್(34) ಎಂದು ಗುರುತಿಸಲಾಗಿದೆ. ಆ ಕಾರಿನಲ್ಲಿ ಒಟ್ಟು 5 ಮಂದಿ ಇದ್ದು ಇಬ್ಬರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿಯಿದೆ. ಯಾವ ಕಾರಣಕ್ಕೆ ಇವರೆಲ್ಲರೂ ಕಾರಿನಲ್ಲಿ ತುಮಕೂರಿಗೆ ತೆರಳಿದ್ದು ಎನ್ನುವ ಬಗ್ಗೆ ಇನ್ನು ತಿಳಿದುಬಂದಿಲ್ಲ.
ಸಾರ್ವಜನಿಕರು ಕುಚ್ಚಂಗಿ ಕೆರೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಶೋಕ್.ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆ ಸಂಬಂಧಪಟ್ಟಂತೆ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.