ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ
– ವಯೋಸಹಜ ಅನಾರೋಗ್ಯ: ತೀವ್ರ ಹೃದಯಾಘಾತದಿಂದ ನಿಧನ
– ಮೈಸೂರಲ್ಲಿ ಅಂತಿಮ ದರ್ಶನಕ್ಕೆ ಅವಕಾಶ
NAMMUR EXPRESS NEWS
ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ (76) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ನಿಧನ ಹೊಂದಿದ್ದಾರೆ. ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಕಳೆದ ವಾರ ಏರುಪೇರಾಗಿತ್ತು. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಕಾಲು ನೋವು, ಮೂತ್ರಪಿಂಡ ಸೋಂಕು ಸೇರಿದಂತೆ ಇತರ ವಯೋಸಹಜ ಕಾಯಿಲೆಯಿಂದ ಏಪ್ರಿಲ್ 22ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಇಂದು ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಪಾರ್ಥಿವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಮೈಸೂರಿಗೆ ಅಂಬ್ಯುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ. ಮೈಸೂರಿನ ವಸ್ತುಪ್ರದರ್ಶನ ಕೇಂದ್ರದಲ್ಲಿ ಸಾರ್ವಜನಿಕದ ದರ್ಶನಕ್ಕೆ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್ ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ್, ಕಳೆದ ಮಾರ್ಚ್ 17 ರಂದು ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮಕ್ಕಳು: ಪ್ರತಿಮಾ ಪ್ರಸಾದ್, ಐ.ಆರ್.ಎಸ್. ಅಧಿಕಾರಿ, ಪೂರ್ಣಿಮಾ ಪ್ರಸಾದ್, ಮಾಜಿ ಶಾಸಕ ಹರ್ಷವರ್ಧನ್ ಪತ್ನಿ, ಪೂನಂ ಪ್ರಸಾದ್, ಬಿಜೆಪಿ ಮುಖಂಡ ಡಾ.ಮೋಹನ್ ಪತ್ನಿ
ರಾಜ್ಯ ರಾಜಕೀಯದಲ್ಲಿ ಹಿರಿಯ ನಾಯಕ
– ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದ.
– ನಂಜನಗೂಡು ಕ್ಷೇತ್ರದಿಂದ 2 ಬಾರಿ ಶಾಸಕ.
– 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ
– 2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿದ್ದರು .
– 24 ಡಿಸೆಂಬರ್ 2016 ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ
– 2017ರಲ್ಲಿ ನಂಜನಗೂಡು ಉಪಚುನಾವಣೆಯಲ್ಲಿ ಸೋಲು
– 2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆ.
– 2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ