ಮಳೆ ಸಿಡಿಲಿಗೆ ಐವರು ಬಲಿ!
– ಕರಾವಳಿಯಲ್ಲಿ ಸಿಡಿಲು ಬಡಿದು ಮೂವರು ಸಾವು!
– ರಾಜ್ಯದ ಹಲವೆಡೆ ಇನ್ನು ಇಬ್ಬರು ಸಾವು: ಭಾರೀ ಅನಾಹುತ
– ಮಳೆ ಆತಂಕದ ನಡುವೆ ಹಲವೆಡೆ ಅನಾಹುತ
NAMMUR EXPRESS NEWS
ಮಂಗಳೂರು/ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ ಜೋರಾಗಿದ್ದು, ಬಹಳಷ್ಟು ಕಡೆ ಮಳೆ ಅನಾಹುತದಿಂದಾಗಿ ಸಾವು-ನೋವು ಸಂಭವಿಸುತ್ತಿದೆ. ಗುರುವಾರ ರಾಜ್ಯದ ವಿವಿಧ ಕಡೆ ಮಳೆ, ಸಿಡಿಲಿಗೆ 5ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.
ಕರಾವಳಿಯಲ್ಲಿ ಮೂವರು ಸಿಡಿಲಿಗೆ ಬಲಿ!
ಕರಾವಳಿ ಭಾಗದಲ್ಲಿಯೂ ಮಳೆಯ ಅವಾಂತರ ಜೋರಾಗಿದ್ದು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಅನಾಹುತಗಳು ಸಂಭವಿಸುವ ಜತೆಗೆ ಅಪಾರ ಪ್ರಮಾಣದ ಬೆಳೆ ನಾಶ ಕೂಡ ಉಂಟಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸಿಡಿಲು ಬಡಿದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳೂರಿನಲ್ಲಿ ಉತ್ತರ ಪ್ರದೇಶದ ಕಾರ್ಮಿಕ ರಾಜ್ ಕುಮಾರ್ ಚೌಧರಿ ಮೃತಪಟ್ಟಿದ್ದಾರೆ. ಅವರು ಜಪ್ಪಿನಮೊಗರು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ಕೆಲಸ ಮುಗಿಸಿಕೊಂಡು ಮನೆಯತ್ತ ನಡೆದುಕೊಂಡು ಹೋಗಬೇಕಾದರೆ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ ಬಂಟ್ವಾಳದ ಇರಾ ಗ್ರಾಮದ ಮುರ್ಕುಂಜ ನಿವಾಸಿ ಸತೀಶ್ ಚೌಟ(43) ಎಂಬವರು ಕೂಡ ಸಿಡಿಲಿನ ಆಘಾತಕ್ಕೆ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿದ್ದ ಅವರು ಗುರುವಾರ ಬೆಳಗ್ಗೆ 6.30ರ ವೇಳೆಗೆ ಎದ್ದು ಪಕ್ಕದಲ್ಲೇ ಇದ್ದ ಟ್ರಾನ್ಸ್ಫಾರ್ಮರ್ ಬಳಿ ನಿಂತಿದ್ದಾಗ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
ಸ್ನಾನಕ್ಕೆ ಹೋದವನಿಗೆ ಸಿಡಿಲು ಬಡಿದು ಸಾವು!
ಉಡುಪಿ ಜಿಲ್ಲೆಯಲ್ಲಿಯೂ ಸಿಡಿಲಿನಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ. ಸ್ನಾನ ಮಾಡಲೆಂದು ಬಚ್ಚಲು ಮನೆ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಶಿರ್ವ ಮಾಣಿಬೆಟ್ಟು ಬಳಿ ಗುರುವಾರ ರಾತ್ರಿ ನಡೆದಿದೆ. ಶಿರ್ವ ಎಂಎಸ್ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ, ಶಿರ್ವ ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿಯವರ ಪುತ್ರ ರಕ್ಷಿತ್ ಪೂಜಾರಿ (20) ಮೃತ ದುರ್ದೈವಿ. ಇವರು ನಿನ್ನೆ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ. ನೆಲಕ್ಕೆ ಕುಸಿದು ಬಿದ್ದಿದ್ದ ಅವರನ್ನು ಮನೆ ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
– ಚಿಕ್ಕೋಡಿ: ಸಿಡಿಲಿನ ಅರ್ಭಟ ಇಬ್ಬರು ಬಲಿ, ಇಬ್ಬರು ಗಂಭೀರ
ಚಿಕ್ಕೋಡಿ: ಮುಂಗಾರು ಆಗಮನಕ್ಕೆ ಮುನ್ನವೇ ಸಿಡಿಲಿನ ಮೂಲಕ ಇಬ್ಬರ ಬಲಿ ಪಡೆದುಕೊಂಡಿದೆ. ಚಿಕ್ಕೋಡಿ ಗ್ರಾಮಾಂತರ ಭಾಗದಲ್ಲಿ ಸಿಡಿಲು ಹೊಡೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ಹೊರವಲಯದಲ್ಲಿ ಘಟನೆ ಸಿಡಿಲು ಬಡಿದು ರೈತ ಮಹಿಳೆ ಸಾವಿಗೀಡಾಗಿದ್ದಾರೆ. ಶೋಭಾ ಕೃಷ್ಣ ಕುಲಗೋಡೆ (45) ಮೃತ ರೈತ ಮಹಿಳೆ. ಸಂಜೆ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸಿಡಿಲು ಹೊಡೆದು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಾಯಗಳಾಗಿವೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಗಾಯಗೊಂಡವರು. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೆಬ್ಬಾಳ ಗ್ರಾಮದಲ್ಲಿ ಸಿಡಿಲು ಅಪ್ಪಳಿಸಿ ಗುರು ಪುಂಡಲಿಕ (35) ಎಂಬವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಗುರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇಬ್ಬರಿಗೆ ಸಂಕೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ಸಿಡಿಲು ಬಡಿದು 12 ಕುರಿಗಳು ಸಾವಿಗೀಡಾಗಿವೆ.
– ಮೈಸೂರು : ಮಳೆ ಅವಘಡಕ್ಕೆ ಜನರು ತತ್ತರ
ಮೈಸೂರು: ಮೈಸೂರಿನ ಹುಣಸೂರು ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಳೇನಹಳ್ಳಿಯಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜೋರಾಗಿ ಸುರಿದ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿದೆ. ವಾಸಕ್ಕೆ ಮನೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಸ್ಥರು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಹನಗೋಡಿನಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದರು. ಹುಣಸೂರು ತಾಲೂಕಿನ ಹನಗೋಡಿ ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಬಸ್ ನಿಲ್ದಾಣ ಕೆರೆಯಂತಾಗಿತ್ತು. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗಿತ್ತು.
– ಬೆಳಗಾವಿ: ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಶೆಡ್
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋರು ಗಾಳಿ ಮಳೆಗೆ ಶೆಡ್ ಹಾರಿ ಹೋಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಶಾಲೆಯ ಶೆಡ್ ಹಾರಿ ಅಕ್ಕಪಕ್ಕದ ಮನೆಗಳು ಹಾಗೂ ವಿದ್ಯುತ್ ತಂತಿಗಳು ಮೇಲೆ ಬಿದ್ದು ಹಾನಿಯಾಗಿತ್ತು.
– ಯಾದಗಿರಿ: ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಮರಗಳು
ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಮರಗಳ ಮೇಲ್ಭಾಗದ ರಂಬೆ, ಕೊಂಬೆಗಳು ಸಂಪೂರ್ಣ ಗಾಳಿಗೆ ಮುರಿದು ಬೋಳಾಗಿದ್ದವು. ಕೆಲವೆಡೆ ಮನೆ ಮುಂದೆ ಇದ್ದ ಮರಗಳು ನೆಲಕ್ಕುರುಳಿದ್ದವು. ಭಾರಿ ಮಳೆಗೆ ಸುಭಾಷ್ ವೃತ್ತದ ಸಮೀಪದ ಪಿಡ್ಲೂಡಿ ಕಚೇರಿ ಆವರಣದೊಳಗೆ ಮಳೆ ನೀರು ನುಗ್ಗಿತ್ತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಮರಗಳು ಧರೆಗುರುಳಿದ್ದವು.
– ಧಾರಾವಾಡ: ಧಾರಾಕಾರ ಮಳೆಗೆ ರಸ್ತೆ ಮೇಲೆ ನಿಂತ ನೀರು
ಧಾರವಾಡದಲ್ಲಿ ಗುರುವಾರದಂದು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಎರಡು ದಿನದಿಂದ ಬ್ರೇಕ್ ಕೊಟ್ಟಿದ್ದ ಮಳೆಯು ಗುರುವಾರ ದಿಢೀರ್ ಅಪ್ಪಳಿಸಿತ್ತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಧಾರವಾಡ ಹೊರವಲಯದ ಕೆಎಂಎಫ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲೇ ನೀರು ನಿಂತಿತ್ತು. ಬಿಆರ್ಟಿಎಸ್ ಕಾರಿಡಾರ್ನಿಂದ ಹರಿದು ಹೋಗದೇ ಇರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶಿಸಿದರು.