ಕರ್ನಾಟಕ ಟಾಪ್ 5 ನ್ಯೂಸ್
– ರಾಜ್ಯದಲ್ಲಿ ಇಂದಿನಿಂದ ಭಾರೀ ಮಳೆ: 12 ಜಿಲ್ಲೆಗಳಿಗೆ ಅಲರ್ಟ್
– ಬಾಗಲಕೋಟೆ: ಮನೆಯ ಚಾವಣಿ ಕುಸಿತ: ಮಕ್ಕಳಿಬ್ಬರು ಸಾವು
– ವಿಜಯನಗರ: ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿ ಧ್ವಂಸ
– ಬೆಂಗಳೂರು: ವಾಣಿಜ್ಯ ಗ್ಯಾಸ್ ಬೆಲೆ ಇಳಿಕೆ: ಗೃಹ ಬಳಕೆ ಯಥಾಸ್ಥಿತಿ
– ಕುಂದಾಪುರ: ವೈದ್ಯೆಗೆ ವೈದ್ಯಾಧಿಕಾರಿ ಕಿರುಕುಳ: ಕೇಸ್
NAMMUR EXPRESS NEWS
ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು. 40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ. ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.
– ವಿಜಯನಗರ: ದೇವಸ್ಥಾನಕ್ಕೆ ನುಗ್ಗಿ ಆಂಜನೇಯ ಮೂರ್ತಿ ಧ್ವಂಸ ಮಾಡಿದ ದುಷ್ಕರ್ಮಿಗಳು
ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ. ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.
ವಾಣಿಜ್ಯ ಗ್ಯಾಸ್ ಬೆಲೆ ಇಳಿಕೆ: ಗೃಹ ಬಳಕೆ ಯಥಾಸ್ಥಿತಿ
ನವದೆಹಲಿ: ಜೂನ್ 1ರಿಂದ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 69.50 ರೂ. ಕಡಿಮೆ ಮಾಡಿವೆ. ಇದರೊಂದಿಗೆ 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 69.50 ರೂ. ಕಡಿತಗೊಂಡು 1,756 ರೂ.ಗೆ ತಲುಪಿದೆ. ಇನ್ನು ದೆಹಲಿಯಲ್ಲಿ ಪರಿಷ್ಕೃತ ದರ 1,676 ರೂ. ಆಗಿದೆ. ಹಿಂದೆ 1745.50 ರೂ. ಆಗಿತ್ತು. ಮುಂಬೈಯಲ್ಲಿಯೂ 69.50 ರೂ. ಇಳಿಕೆಯಾಗಿದ್ದು ಹೊಸ ಬೆಲೆಯನ್ನು 1,629 ರೂ.ಗೆ ನಿಗದಿಪಡಿಸಲಾಗಿದೆ. ಚೆನ್ನೈನಲ್ಲಿ 1,840.5೦ ರೂ., ಕೋಲ್ಕತ್ತಾದಲ್ಲಿ ದರ ಪರಿಷ್ಕರಣೆಯ ಬಳಿಕ 1,787 ರೂ. ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಕಿನಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಮಧ್ಯೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 805.50 ರೂ. ಇದೆ.
ರಾಜ್ಯದಲ್ಲಿ ಇಂದಿನಿಂದ ಭಾರೀ ಮಳೆ: 12 ಜಿಲ್ಲೆಗಳಿಗೆ ಅಲರ್ಟ್
ಬೆಂಗಳೂರು : ರಾಜ್ಯದ ಗಡಿ ಜಿಲ್ಲೆಗಳಿಗೆ ಮುಂಗಾರು ಮಳೆಯ ಪ್ರವೇಶವಾಗಿದ್ದು, ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಜೂನ್ 7 ವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಲಾರ, ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕುಂದಾಪುರ ವೈದ್ಯೆಗೆ ವೈದ್ಯಾಧಿಕಾರಿ ಕಿರುಕುಳ: ಕೇಸ್
ಕುಂದಾಪುರ: ಕುಂದಾಪುರ ಸರ್ಕಾರಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ವಿರುದ್ಧ ಸಹೋದ್ಯೋಗಿ ವೈದ್ಯೆಯೊಬ್ಬರು ಮಾನಸಿಕ ಕಿರುಕಳದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೈದ್ಯಾಧಿಕಾರಿ ರಾಬರ್ಟ್ ವಿರುದ್ಧ ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿತ್ತು. ಸದ್ಯ, ತನ್ನ ಸಹೋದ್ಯೋಗಿ ವೈದ್ಯೆಗೆ ಕಳೆದ ಆರು ತಿಂಗಳಿಂದ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಮಾನಸಿಕ ಹಿಂಸೆ ನೀಡಿದ್ದಲ್ಲದೇ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಕರ್ತವ್ಯದ ಆರಂಭದ ದಿನಗಳಿಂದ ಆಪಾದಿತನು ದೂರುದಾರರಿಗೆ ಕರ್ತವ್ಯದ ಸಮಯ ಮುಗಿದ ಮೇಲೆ ರಾತ್ರಿ 10-11 ಗಂಟೆಯ ನಂತರದಲ್ಲಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿ ವೈಯುಕ್ತಿಕ ಬದುಕನ್ನು ಕೆದಕುವ ಪ್ರಯತ್ನ ಮಾಡಿದ್ದಲ್ಲದೇ, ವೀಡಿಯೋ ಕರೆಗಳನ್ನು ಮಾಡಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಸಂತ್ರಸ್ತೆ ವೈದ್ಯೆ ಹೇಳಿದ್ದಾರೆ. ಅಲ್ಲದೇ ರಾತ್ರಿ ಕರ್ತವ್ಯದ ಹೊರತು ಸಮಯದಲ್ಲಿ ಅತೀ ಅಶ್ಲೀಲವಾಗಿ, ದೈಹಿಕ ರೂಪದ ಬಗ್ಗೆ ವರ್ಣಿಸುವುದು ಅಗೌರವಪೂರಕವಾಗಿ ಸಂಭಾಷಣೆಯ ಮೂಲಕ ತೀವ್ರ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಾತ್ರವಲ್ಲದೇ, ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಹಾಗೂ ಕೌಂಟುಂಬಿಕ ಹಾಗೂ ವೈಯುಕ್ತಿಕ ಮರ್ಯಾದೆಗೆ ಅಂಜಿ ಆರೋಪಿತನಿಗೆ ಗೌರವಪೂರ್ವಕವಾಗಿ ಉತ್ತರಿಸುತ್ತಾ ಆರೋಪಿತನ ಕೋರಿಕಗಳನ್ನು ನಿರಾಕರಿಸುತ್ತಾ ಬಂದರೂ ಆಪಾದಿತ ವೈದ್ಯ ದೂರುದಾರರು ಆಸ್ಪತ್ರೆಯ ಇತರ ಪುರುಷ ಸಿಬ್ಬಂದಿಯವರೊಂದಿಗೆ ಸ್ವಾಭಾವಿಕವಾಗಿ ಸಂಭಾಷಣೆ ಮಾಡಿರುವುದಕ್ಕೆ ಕಥೆಗಳನ್ನು ಕಟ್ಟಿ ಜೀವಬೆದರಿಕೆಯನ್ನು ಹಾಕಿದ್ದಲ್ಲದೇ, ಉದ್ಯೋಗದಿಂದ ತೆಗೆಯವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಠಾಣೆಯಲ್ಲಿ ಸಂತ್ರಸ್ತೆ ವೈದ್ಯೆ ದೂರು , 354, 354A, 504, 506, 509 0 ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ತಲೆಮರೆಸಿಕೊಂಡಿದ್ದಾರೆ