ಮದುವೆ ಪತ್ರಿಕೆಯಲ್ಲೂ ಮತ್ತೊಮ್ಮೆ ಮೋದಿ!
– ಹೀಗೊಂದು ರೀತಿಯಲ್ಲೂ ಚುನಾವಣೆ ಪ್ರಚಾರ
– ಬಾಗಲಕೋಟೆ, ಚಿಕ್ಕಮಗಳೂರಲ್ಲಿ ಮದುವೆ ಕಾರ್ಡಲ್ಲಿ ಮೋದಿ
NAMMUR EXPRESS NEWS
ಬಾಗಲಕೋಟೆ: ಲೋಕ ಸಭಾ ಚುನಾವಣೆ ಕ್ರೇಜ್ ಶುರುವಾಗಿದೆ. ಎಲ್ಲೆಲ್ಲೂ ಪ್ರಚಾರ ಜೋರಾಗಿದೆ. ಈ ನಡುವೆ ಮದುವೆ ಪತ್ರಿಕೆಯಲ್ಲೂ ಮೋದಿ ಪರ ಪ್ರಚಾರ ಮಾಡುವ ಮೂಲಕ ಇಲ್ಲೊಂದು ಜೋಡಿ ಭಾರೀ ಸದ್ದು ಮಾಡಿದೆ. ಮದುವೆ ಕುರಿತಾಗಿ ನವ ವಧು- ವರರು ವಿಭಿನ್ನವಾಗಿರಬೇಕೆಂದು ಯೋಚಿಸುತ್ತಾರೆ. ಹೀಗೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಯೋಚನೆ ಮಾಡಿ ಮದುವೆ ಆಮಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿ ಚುನಾವಣಾ ಪ್ರಚಾರವನ್ನು ಮಾಡಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ವಧುವಿನ ಕಡೆಯವರು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚಿಸಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.
ಲಗ್ನ ಪತ್ರಿಕೆ ಮೂಲಕ ಚುನಾವಣೆ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡಿದರೆ ನನ್ನ ಮದುವೆಗೆ ನಿಜವಾದ ಉಡುಗೊರೆ ಎಂದು ಮುದ್ರಿಸುವ ಮೂಲಕ ಮೋದಿ ಅಭಿಮಾನಿಗಳು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ ಬನಹಟ್ಟಿಯ ಪ್ರಭು ಕರಲಟ್ಟಿ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಹೀಗಾಗಿ ಪುತ್ರಿಯ ವಿವಾಹ ಆಮಂತ್ರಣದಲ್ಲಿ ಮೋದಿ ಭಾವಚಿತ್ರ ಮುದ್ರಿಸಿ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸಬೇಕೆಂದು ಸಂದೇಶ ಸಾರಿದ್ದಾರೆ. ಜ.28ರಂದು ವಿವಾಹ ನಡೆದಿದ್ದು, ಗಂಡಿನ ಮನೆಯವರನ್ನೂ ಒಪ್ಪಿಸಿ ಆಮಂತ್ರಣ ಪತ್ರಿಕೆಯಲ್ಲಿ ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ-2024ಎಂದು ಕಮಲ ಚಿಹ್ನೆಯ ಮೂಲಕ ಟ್ಯಾಗ್ ಲೈನ್ ಜನರನ್ನು ಆಕರ್ಷಿಸುತ್ತಿದೆ.
ಕಾಫಿನಾಡಲ್ಲಿ ಮದುವೆ ಪತ್ರಿಕೆಯಲ್ಲಿ ಮೋದಿ!
ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿಭಿನ್ನವಾದ ಮದುವೆಯ ಆಮಂತ್ರಣ ಪತ್ರಿಕೆಯೊಂದು ಸಖತ್ ವೈರಲ್ ಆಗುತ್ತಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವಧುವಿನ ಅಣ್ಣನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗಳ ಮೇಲಿರುವ ಪ್ರೀತಿ ಹಾಗೂ ಬಿಜೆಪಿ ಪಕ್ಷದ ಮೇಲಿರುವ ನಿಯತ್ತು ಪ್ರದರ್ಶನವಾಗಿದ್ದು, ಬಿಜೆಪಿ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿ ಮದುವೆಯ ಆಮಂತ್ರಣ ಪತ್ರಿಕೆ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾದ ಆಲ್ದುರಿನ ಶಶಿ, ಫೆಬ್ರವರಿ 5 ರಂದು ಚಿಕ್ಕಮಗಳೂರಿನಲ್ಲಿ ತನ್ನ ತಂಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚಿಸಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ವಧುವರರಿಗೆ ಉಡುಗೊರೆ ಬೇಡ… ಮೋದಿಗೆ ಮತ ನೀಡಿ. ಯಾಕೆಂದರೆ ಮಕ್ಕಳ ಭವಿಷ್ಯ ಮೋದಿಯಿಂದ ಮಾತ್ರ ಸುಭದ್ರ ಎಂದು ಮದುವೆ ಆಮಂತ್ರಣದಲ್ಲಿ ಮೋದಿ ಮತ ನೀಡುವಂತೆ ಮನವಿ ಮಾಡಿದ್ದಾರೆ. ಈ ಪತ್ರಿಕೆ ಇದೀಗ ವೈರಲ್ ಆಗುತ್ತಿದೆ.