ಬಿಸಿಲಿನ ನಡುವೆ ರಾಜಕೀಯದ ಬಿಸಿ..!
– ಹಳ್ಳಿ ಹಳ್ಳಿಯಲ್ಲೂ ಪ್ರಚಾರಕ್ಕೆ ಅಡ್ಡಿ
– ಬಿಸಿಲಿನ ಶಾಖಕ್ಕೆ ಕಾರ್ಯಕರ್ತರು ಸುಸ್ತೋ ಸುಸ್ತು!
NAMMUR EXPRESS NEWS
ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಅಭ್ಯರ್ಥಿಗಳಿಗೆ ಗೆಲುವಿನ ಒತ್ತಡ ನಿದ್ದೆಗೆಡುವಂತೆ ಮಾಡಿದರೆ, ಹಗಲಿನಲ್ಲಿ ಉರಿ ಬಿಸಿಲು, ರಾತ್ರಿ ಧಗೆ ಕಾರ್ಯಕರ್ತರ ನಿದ್ದೆಗೆಡೆಸಿದೆ. ಈಗಾಗಲೇ ಏ.26ರಂದು ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಮುಗಿದಿದೆ. ಇನ್ನು 14 ಕ್ಷೇತ್ರಗಳಲ್ಲಿ ಮೇ 7ಕ್ಕೆ ಮತದಾನ ನಡೆಯಲಿದೆ. ಎಲ್ಲಾ ಪಕ್ಷದ ಕಾರ್ಯಕರ್ತರು ಉರಿ ಬಿಸಿಲಲ್ಲಿ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೇಸಿಗೆ ಧಗೆಯಲ್ಲೇ ಚುನಾವಣಾ ಕಾವು ಹೆಚ್ಚಿಸಿದೆ. ಕಾರ್ಯಕರ್ತರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಯಕರ್ತರು ತಣ್ಣೀರು ಹಾಗೂ ಮಜ್ಜಿಗೆ ಕುಡಿಯುತ್ತ ಪ್ರಚಾರ ಮಾಡುತ್ತಿದ್ದಾರೆ.
ಮದ್ಯಾಹ್ನದ ನಂತರ ಸಂಜೆ 5 ಗಂಟೆಯ ನಂತರವೇ ಪ್ರಚಾರ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ವೇಳೆಯಲ್ಲೇ ಪ್ರಚಾರ ಸಭೆಗಳು ನಡೆಯುತ್ತಿವೆ. ಬೆಳಿಗ್ಗೆ 8 ಗಂಟೆ ವೇಳೆಗೆ ಧಗೆ ಆವರಿಸಿಕೊಳ್ಳುತ್ತಿದೆ. ಟವಾಲು, ಟೊಪ್ಪಿಗೆ, ಪೇಟ ಹಾಗೂ ನೀರಿನ ಬಾಟಲಿ ಇಲ್ಲದೆ ಮನೆಗಳಿಂದ ಹೊರಗೆ ಬೀಳುವುದು ಕಷ್ಟವಾಗಿದೆ. ಧಗೆಗೆ ಮೈಮೇಲಿನ ಬಟ್ಟೆಗಳು ಹಾಗೂ ರುಮಾಲುಗಳು ತೊಯ್ದು ತೊಪ್ಪೆಯಾಗುತ್ತಿವೆ. ಚುನಾವಣೆ ಪ್ರಚಾರದಿಂದ ಕಾರ್ಯ ಕರ್ತರಿಗೆ ಸುಸ್ತೊ ಸುಸ್ತು ಆಗುತ್ತಿದೆ. ಒಂದು ತಾಸು ಬಿಸಿಲಲ್ಲಿ ತಿರುಗಾಡಿದರೆ ತಲೆ ಸುತ್ತು ಬರುತ್ತಿದೆ. ಬಿಸಿಲು ಪ್ರಚಾರಕ್ಕೂ ತೊಡಕು ಉಂಟು ಮಾಡಿದೆ.
ಮಹಿಳೆಯರು ಚಕ್ಕರ್!
ಮಹಿಳೆಯರಂತೂ ಪ್ರಚಾರಕ್ಕೆ ಬರುತ್ತಿಲ್ಲ. ಅಪರೂಪಕ್ಕೆ ಎನ್ನುವಂತೆ ಪ್ರಚಾರದ ತಂಡಗಳಲ್ಲಿ ಒಬ್ಬರೋ, ಇಬ್ಬರೋ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯರು ಆರೋಗ್ಯ ಸಮಸ್ಯೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಯುವಕರೇ ಸಂಜೆ ವೇಳೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಸಿ ಧಗೆ ಅವರನನ್ನೂ ಸುಸ್ತೋ ಸುಸ್ತಾಗಿ ಮಾಡಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ತಂಪು ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳಕ್ಕೆ ತಂದ ಕೆಲವೇ ಕ್ಷಣಗಳಲ್ಲೇ ಅವು ಖಾಲಿಯಾಗುತ್ತಿವೆ.