– ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಅಜ್ಜಿ
– ಪ್ರತಿ ಮಹಿಳೆಯೂ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ: ಸಿದ್ದರಾಮಯ್ಯ
NAMMUR EXPRESS NEWS
ಬೆಳಗಾವಿ: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಧಾರವಾಡದಲ್ಲಿ ವೃದ್ಧೆ ನಿಂಗವ್ವಾಶಿಂಗಾಡಿ ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ಸಿನೊಳಗೆ ಪ್ರವೇಶಿಸಿದ್ದು ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಬಸ್ ಹತ್ತುವ ಮುನ್ನ ಅಜ್ಜಿ ಬಸ್ ಮೆಟ್ಟಿಲಿಗೆ ನಮಸ್ಕರಿಸಿದ್ದು ಈ ಕುರಿತು ಫೋಟೋ ವೈರಲ್ ಆಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅಜ್ಜಿಯ ಪೋಟೋ ಹಂಚಿಕೊಂಡು ಯೋಜನೆ ತಂದಿದ್ದಕ್ಕೆ ಸಾರ್ಥಕವಾಯ್ತು ಎಂದು ಹೇಳಿದ್ದಾರೆ.
ಯೋಜನೆ ಬಗ್ಗೆ ಅಜ್ಜಿ ನಿಂಗವ್ವಾ ಶಿಂಗಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.
ಎಲ್ಲ ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಮಾಡಿದ್ದಕ್ಕೆ ಬಹಳ ಅನುಕೂಲ ಆಗಿದೆ. ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಭಾನುವಾರ ಮೊಮ್ಮಗನ ಮನೆ ಗೃಹ ಪ್ರವೇಶ ಇರುವ ಹಿನ್ನೆಲೆ ನಿಂಗವ್ವ ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದು ಸವದತ್ತಿ ಕಡೆಗೆ ಪ್ರಯಾಣ ಮಾಡುತ್ತಿದ್ದರು. ಅದೇ ವೇಳೆ ಭಾನುವಾರ ಮಧ್ಯಾಹ್ನದ ಬಳಿಕ ಬಸ್ ಫ್ರೀ ಎಂದು ಗೊತ್ತಾಗಿ ನಿಂಗವ್ವ ಬಸ್ ಮೆಟ್ಟಿಲಿಗೆ ನಮಸ್ಕರಿಸಿದ್ದರು. ಈ ಕುರಿತ ಪೋಟೋ ಭಾರೀ ಸದ್ದು ಮಾಡಿದ್ದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.
ಶಕ್ತಿ ಯೋಜನೆಯನ್ನು ಹೆಮ್ಮೆಯಿಂದ ಅರ್ಪಿಸಿದ ಸಿಎಂ
ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಹಗಲಿರುಳು ಶ್ರಮಿಸುತ್ತಿರುವ ನನ್ನ ಸಹೋದರಿಯರಿಗೆ, ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲಾ ಕಾಲೇಜುಗಳಿಗೆ ಪ್ರಯಾಣ ಬೆಳೆಸುವ ವಿದ್ಯಾರ್ಥಿನಿಯರಿಗೆ, ಅನಾರೋಗ್ಯ, ಅಗತ್ಯ ವಸ್ತುಗಳ ಖರೀದಿ ಇನ್ನಿತರ ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ ಮಾಡುವ ನಾಡಿನ ತಾಯಂದಿರಿಗೆ ನಮ್ಮ ಈ ಶಕ್ತಿ ಯೋಜನೆಯನ್ನು ಅತ್ಯಂತ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ.
ಆರ್ಥಿಕ ಸಂಕಷ್ಟದ ನಡುವೆಯೂ ಬದುಕಿನ ಉತ್ಸಾಹ ಕಳೆದುಕೊಳ್ಳದೆ, ಸವಾಲುಗಳನ್ನು ಮೆಟ್ಟಿನಿಂತು ಹೋರಾಟದ ಮೂಲಕ ಬದುಕು ಕಟ್ಟಿಕೊಂಡಿರುವ ಕನ್ನಡ ನೆಲದ ಪ್ರತಿ ಮಹಿಳೆಯೂ ನಮ್ಮ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ. ನಾಡಿನ ಎಲ್ಲ ಮಹಿಳೆಯರು ನಮ್ಮ ಈ ಯೋಜನೆಯ ಲಾಭ ಪಡೆದು ಮತ್ತಷ್ಟು ಸಶಕ್ತ ಮತ್ತು ಸ್ವಾವಲಂಬಿಗಳಾಗಲಿ ಎಂದು ಮನಸ್ಪೂರ್ತಿಯಾಗಿ ಹಾರೈಸುತ್ತೇನೆ.– ಸಿದ್ದರಾಮಯ್ಯ, ಮುಖ್ಯಮಂತ್ರಿ