ಬಿಸಿಲು ಸುಡುತ್ತೆ..ಅರೋಗ್ಯ ಕೆಡುತ್ತೆ ಹುಷಾರ್!
– ಕರ್ನಾಟಕದಲ್ಲಿ ಅತೀ ಹೆಚ್ಚು ಬಿಸಿಲು ದಾಖಲೆ
– ಹೀಗೆ ಆದ್ರೆ ಬದುಕು ಬಲು ಕಷ್ಟ
– ಬೆಂಗಳೂರು, ಮಲೆನಾಡು, ಕರಾವಳಿಯಲ್ಲೂ ಬಿಸಿಲಿನ ದಾಖಲೆ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದ್ದು ದಿನೇ ದಿನೇ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮೇ 1ರ ಬುಧವಾರ ನಾಲ್ಕು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ. ಮೊದಲ ಬಾರಿಗೆ ಈಗಾಗಲೇ ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಮೂರು ತಿಂಗಳಿನಿಂದ ಏರಿಕೆಯಾಗುತ್ತಲೇ ಇದೆ. 44 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದ ಉಷ್ಣಾಂಶದ ಪ್ರಮಾಣ ಈಗ ಅದನ್ನೂ ದಾಟಿದೆ. ಮುಂದಿನ 5 ದಿನಗಳವರೆಗೆ ಶಾಖದ ಅಲೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆಯು ಚಾಲ್ತಿಯಲ್ಲಿರುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನದ ಪರಿಸ್ಥಿತಿಗಳು ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತ ಹವಮಾನ ಇಲಾಖೆಯು ಹೇಳಿದೆ. ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 38.5 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಇದು ಎಂಟು ವರ್ಷ ನಂತರದ ಅತ್ಯಧಿಕ ಉಷ್ಣಾಂಶ 2016 ರಲ್ಲಿ ಉಷ್ಣಾಂಶ ಪ್ರಮಾಣ 39.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದನ್ನೇ ಅಧಿಕ ಎಂದುಕೊಳ್ಳಲಾಗಿತ್ತು. ಈಗ ಮೇ ನಲ್ಲಿ ಇದು 40 ಡಿಗ್ರಿ ಸೆಲ್ಸಿಯಸ್ ಅನ್ನು ತಲುಪಿದೆ.
ಎಲ್ಲೆಲ್ಲಿ ಅತೀ ಹೆಚ್ಚು ಬಿಸಿಲು?!
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕಲಬುರ್ಗಿ, ಕೋಲಾರ, ಮಂಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ವಿಜಯಪುರ, ತುಮಕೂರು, ಉಡುಪಿ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಯ ಬಹುತೇಕ ಕಡೆ 40 ಡಿಗ್ರಿ ಸೆಲ್ಸಿಯಸ್ಗೂ ಅಧಿಕ ತಾಪಮಾನ ದಾಖಲಾಗಿದೆ.
ಮಲೆನಾಡು, ಕರಾವಳಿಯಲ್ಲೂ ಗರಿಷ್ಠ ತಾಪಮಾನ
ಹಸಿರು ನಾಡು ಮಲೆನಾಡು ಹಾಗೂ ಕಡಲ ನಾಡು ಕರಾವಳಿಯಲ್ಲೂ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಹತ್ತಿರ ಬರುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.