ಟಾಪ್ 3 ನ್ಯೂಸ್ ಕರ್ನಾಟಕ
ಸಿದ್ದರಾಮಯ್ಯ ವಿರುದ್ಧ ನಕಲಿ ಪೋಸ್ಟ್..!
– 7 ಜನರ ವಿರುದ್ಧ ಎಫ್ಐಆರ್ ದಾಖಲು
– ಯುಗಾದಿ ಹಬ್ಬಕ್ಕೆ ಬೈಕ್ ತೊಳೆದ ವ್ಯಕ್ತಿ..!
– ರಾಜ್ಯದಲ್ಲಿ ಬೇಸಿಗೆ ಬವಣೆ: 3 ದಿನದಲ್ಲೇ 5 ಕಾಡಾನೆ ಸಾವು
NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆ ಶುರುವಾಗುತ್ತಿದ್ದಂತೆ ಒಂದಲ್ಲಾ ಒಂದು ರೀತಿಯ ಘಟನೆಗಳು ನಡೆಯುತ್ತಲೆ ಇವೆ. ಇದೀಗ ಸಿಎಂ ಸಿದ್ದರಾಮಯ್ಯ ಹೇಳಿರುವಂತೆ ನಕಲಿ ಪೋಸ್ಟ್ ವೈರಲ್ ಆಗಿದೆ. ಈ ಸಂಬಂಧ 7 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಹಿಂದುಗಳ ವೋಟ್ ಅವಶ್ಯಕತೆ ಇಲ್ಲ ನಮಗೆ ಮುಸ್ಲಿಮರ ಓಟು ಸಾಕು ಎಂದು ನಕಲಿ ಪೋಸ್ಟ್ ವೈರಲ್ ಆಗಿದ್ದು ಅದನ್ನು ಪತ್ರಿಕೆಯಲ್ಲಿ ವರದಿ ಬಂದಂತೆ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಿದ್ದಾರೆ.ಇದನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಬಿಂಬಿಸುವ ರೀತಿಯಲ್ಲಿ ಕ್ರೀಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.ಇದೀಗ ಕಾಂಗ್ರೆಸ್ ಕಾನೂನು ಘಟಕದ ಹರೀಶ್ ನಾಗರಾಜು ಅವರಿಂದ ದೂರು ನೀಡಲಾಗಿದೆ.
– ಯುಗಾದಿ ಹಬ್ಬಕ್ಕೆ ಬೈಕ್ ತೊಳೆದ ವ್ಯಕ್ತಿ..!
ಬೆಂಗಳೂರಲ್ಲಿ ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಇದರ ಮಧ್ಯ ಬಿಸಿಲಿನ ತಾಪಕ್ಕೆ ಜನ ರೋಸಿ ಹೋಗಿದ್ದಾರೆ. ಅಲ್ಲದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರನ್ನು ಕುಡಿಯಲು ಬಿಟ್ಟು ಅನ್ಯಬಳಕೆ ಮಾಡದಂತೆ ಆದೇಶ ಹೊರಡಿಸಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿ ಯುಗಾದಿ ಹಬ್ಬಕ್ಕೆಂದು ಬೈಕ್ ತೊಳೆದಿದ್ದರಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ 5,000 ರೂ. ದಂಡ ವಿಧಿಸಿದ್ದಾರೆ. ಒಂದು ತಿಂಗಳಿಂದ ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವ ಜನರಿಗೆ ಜಲಮಂಡಳಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಇದುವರೆಗೂ ಬರೋಬ್ಬರಿ 365 ಜನರಿಗೆ ದಂಡ ಹಾಕಲಾಗಿದೆ. ಈ ಪೈಕಿ 362 ಜನರಿಂದ ಬರೋಬ್ಬರಿ 19 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ರಾಜ್ಯದಲ್ಲಿ ಬೇಸಿಗೆ ಬವಣೆ: 3 ದಿನದಲ್ಲೇ 5 ಕಾಡಾನೆ ಸಾವು
ಈ ಬಾರಿ ಬಿಸಿಲಿನ ಬೇಗೆ ಮನುಷ್ಯನಿಗೆ ಮಾತ್ರ ತಟ್ಟಿಲ್ಲ. ವನ್ಯಜೀವಿಗಳ ಮೇಲೂ ಪ್ರಭಾವ ಬೀರಿದೆ. ಅದರಲ್ಲೂ ಕಾಡಾನೆಗಳು ಅರಣ್ಯದಲ್ಲಿ ಬಿಸಿಲ ಕಾರಣಕ್ಕೆ ಸಾಯುತ್ತಿದೆ. ಮೂರು ದಿನದ ಅಂತರದಲ್ಲೇ ಐದು ಆನೆಗಳು ಜೀವ ಬಿಟ್ಟಿರುವುದು ಬಿಸಿಲ ಪರಿಣಾಮವನ್ನು ತೋರುತ್ತಿದೆ. ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಾಡಾನೆಗಳು ಮೃತಪಟ್ಟಿದ್ದು. ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಕೆಲವು ಆನೆಗಳು ನೀರಿನ ಕೊರತೆಯಿಂದ ಮೃತಪಟ್ಟರೆ, ಆಹಾರದಲ್ಲಿ ವ್ಯತ್ಯಯವಾಗಿ ಅನಾರೋಗ್ಯದಿಂದ ಎರಡು ಆನೆಗಳು ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ತಮಿಳುನಾಡು ಗಡಿಯಲ್ಲಿರುವ ಕಾವೇರಿ ವನ್ಯಜೀವಿ ಧಾಮದ ಗೋಪಿನಾಥಂನ ಕಾವೇರಿ ನದಿ ತೀರದಲ್ಲಿ ಭಾರೀ ಗಾತ್ರದ ಆನೆ ಮೃತಪಟ್ಟಿದೆ. ಅಲ್ಲಿಯೇ ಬಿದ್ದು ಮೂರು ದಿನಗಳಾಗಿದ್ದು ದೇಹದ ಭಾಗವನ್ನು ಮೀನುಗಳು ತಿಂದಿವೆ. ನೀರು ಕುಡಿಯಲೆಂದು ಆನೆ ಕಾವೇರಿ ನದಿಗೆ ಬಂದಾಗ ಜಾರಿ ಬಿದ್ದಿದೆ. ಮತ್ತೆ ಮೇಲೆ ಏಳಲು ಆನೆಗೆ ಆಗಿಲ್ಲ.
ಮಾವು ತಿಂದು ಸಾವು: ಬೇಸಿಗೆ ಕಾರಣಕ್ಕೆ ದೂರದಿಂದ ಆನೆ ನೀರು ಕುಡಿಯಲು ಬಂದಾಗ ಬಿದ್ದು ಮೃತಪಟ್ಟಿರುವ ಅನುಮಾನಗಳಿವೆ. ಆನೆಯ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದ ಭಾಗವನ್ನು ವಿಧಿವಿಜ್ಞಾನ ಪ್ರಯೋಗಾಲಕ್ಕೆ ರವಾನಿಸಲಾಗಿದ್ದು. ವರದಿ ಬಂದ ನಂತರ ಆನೆಯ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ ಹೇಳುತ್ತಾರೆ.