ಟಾಪ್ ನ್ಯೂಸ್
ಈಶ್ವರಪ್ಪ ಚುನಾವಣ ಕಚೇರಿ ಮುಂದೆ ಮಾಟ ಮಂತ್ರ!
– ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳವು
– ಭದ್ರಾವತಿ: ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪ 14 ಮಹಿಳೆಯರ ವಿರುದ್ಧ ಪ್ರಕರಣ ದಾಖಲು
– ಹೊಸನಗರ : ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ಅಕ್ರಮದ ಶಂಕೆ
NAMMUR EXPRESS NEWS
ಶಿಕಾರಿಪುರ : ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣ ಕಚೇರಿ ಮುಂದೆ ವಾಮಾಚಾರ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ರಾಷ್ಟ್ರಭಕ್ತರ ಬಳಗದ ಶಿಕಾರಿಪುರ ಕಚೇರಿಯ ಬಾಗಿಲಿನ ಮುಂದೆ ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿ ಹಲವು ವಸ್ತು ಪತ್ತೆಯಾಗಿದೆ. ಕಳೆದ ರಾತ್ರಿ ವಾಮಾಚಾರ ಮಾಡಿಸಲಾಗಿದೆ ಎಂದು ಈಶ್ವರಪ್ಪ ಅವರು ವಾಟ್ಸಪ್ ಮೂಲಕ ಮಾಧ್ಯಮಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
– ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳವು
ಶಿವಮೊಗ್ಗ : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳ್ಳತನವಾಗಿದೆ. ಕಸ್ತೂರ ಬಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಶಿಕಾರಿಪುರ ತಾಲೂಕು ತಾಳಗುಂದದ ಸಿಂಚನಾ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿದೆ. ಅಂದಾಜು 44 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಸರ ಕಳುವಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏ.18 ಮತ್ತು 19ರಂದು ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಸಿಂಚನಾ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೊಠಡಿಯೊಳಗೆ ಸರ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದೆ. ಆದ್ದರಿಂದ ತನ್ನ ಕೊರಳಲ್ಲಿದ್ದ ಚಿನ್ನದ ಸರ ತೆಗೆದು ಬ್ಯಾಗಿನಲ್ಲಿ ಇಟ್ಟಿದ್ದಳು. ಎಲ್ಲ ವಿದ್ಯಾರ್ಥಿಗಳು ಬ್ಯಾಗ್ ಇಟ್ಟಿದ್ದ ಸ್ಥಳದಲ್ಲೇ ತನ್ನ ಬ್ಯಾಗ್ ಇಟ್ಟಿದ್ದಳು. ಏ.19 ರಂದು ಪರೀಕ್ಷೆ ಮುಗಿಸಿ ಬಂದು ಬ್ಯಾಗಿನಲ್ಲಿ ಪರಿಶೀಲಿಸಿದಾಗ ಚಿನ್ನದ ಸರವಿರಲಿಲ್ಲ. ಪೋಷಕರಿಗೆ ವಿಷಯ ತಿಳಿಸಿ ತಡವಾಗಿ ದೂರು ನೀಡಿದ್ದಾರೆ.
– ಭದ್ರಾವತಿ: ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪ 14 ಮಹಿಳೆಯರ ವಿರುದ್ಧ ಪ್ರಕರಣ ದಾಖಲು
ಭದ್ರಾವತಿ : ದಾನವಾಡಿಯಲ್ಲಿ ಎಂಪಿಎಂಗೆ ಗುತ್ತಿಗೆ ನೀಡಿರುವ ನೀಲಗಿರಿ ನೆಡುತೋಪಿನಲ್ಲಿ ಮರ ಕಡಿದ ಆರೋಪದ ಹಿನ್ನೆಲೆ 14 ಮಹಿಳೆಯರ ವಿರುದ್ಧ ಭದ್ರಾವತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಏ.26ರಂದು ಮರ ಕಡಿಯುತ್ತಿರುವ ಶಬ್ದ ಕೇಳಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಮಹಿಳೆಯರು ಅಕ್ರಮವಾಗಿ ಮರ ಕಡಿಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಹಿಳೆಯರು ಮರ ಕಡಿ ತಲೆ ಮಾಡಿದ್ದರಿಂದ ಸರ್ಕಾರಕ್ಕೆ 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು, ಮಹಿಳೆಯರ ವಿರುದ್ಧ ಸಹಾಯಕ ಅರಣ್ಯಾಧಿಕಾರಿ ಕೃಷ್ಣ ಹನುಮಂತಪ್ಪ ಸಾರಥಿ ಎಂಬುವವರು ದೂರು ನೀಡಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಹೊಸನಗರ : ಒಂದೇ ಪರವಾನಗಿಯಲ್ಲಿ ಎರಡು ಕಡೆ ನಾಟಾ ಸಾಗಾಟ ಅಕ್ರಮದ ಶಂಕೆ
ಹೊಸನಗರ : ತಾಲೂಕಿನ ಪುಣಜೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ನೂತನ ಮನೆಗೆ ಅಕ್ರಮ ನಾಟಾ ಸರಬರಾಜು ಆಗಿರುವುದಾಗಿ ಸ್ಥಳೀಯ ನಿವಾಸಿ, ಆರ್ಟಿಐ ಕಾರ್ಯಕರ್ತ ಹರೀಶ್ ಆಚಾರ್ ಆರೋಪಿಸಿದ್ದಾರೆ. ಅವರು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದು, ರಾಮಗಿರಿಯಿಂದ ಇತ್ತೀಚೆಗೆ ಸಾಗುವಾನಿ ಹಾಗೂ ಕಾಡುಜಾತಿಯ ಮರಗಳನ್ನು ಹೊಸನಗರದ ವುಡ್ ಇಂಡಸ್ಟ್ರೀಸ್ ಮೂಲಕ ಕೊಂಡುಕೊಂಡಿರುವುದಾಗಿ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಅದೇ ಪರವಾನಗಿಯಲ್ಲಿ ನಾಟಾವನ್ನು ಕುಂದಾಪುರಕ್ಕೆ ಸಾಗಿಸಲಾಗಿದೆ. ಒಂದೇ ಪರವಾನಗಿಯಲ್ಲಿ ಎರಡು ಕಡೆಗಳಿಗೆ ಹೇಗೆ ನಾಟಾ ಸಾಗಿಸಲು ಅನುಮತಿ ನೀಡಲಾಗಿದೆ?. ಕುಂದಾಪುರಕ್ಕೆ ಸಾಗಿಸಿದ ನಾಟಾ ಪರವಾನಗಿ ಇಲ್ಲದೇ ಮತ್ತೆ ಪುಣಜೆ ಗ್ರಾಮಕ್ಕೆ ಬಂದದ್ದು ಹೇಗೆ? ಎನ್ನುವುದು ತಿಳಿಯುತ್ತಿಲ್ಲ. ಅಲ್ಲದೇ ಕಟ್ಟಡದಲ್ಲಿ ಬಳಸಿರುವ ನಾಟಾದ ಅಳತೆಗೂ ಪರವಾನಗಿಯಲ್ಲಿ ತೋರಿಸಿರುವ ಅಳತೆಗೂ ತಾಳೆಯಾಗುತ್ತಿಲ್ಲ. ಪರವಾನಗಿಯಲ್ಲಿ ಕಾಡುಜಾತಿಯ ಮರಗಳು ಎಂದು ತೋರಿಸಲಾಗಿದೆ. ಆದರೆ ಇಲ್ಲಿ ಬೆಲೆಬಾಳುವ ಮತ್ತಿ, ನಂದಿ, ಹೊನ್ನೆ ಜಾತಿಯ ನಾಟಾ ಬಳಸಲಾಗಿದೆ. ಇದರಲ್ಲಿ ಅಕ್ರಮ ನಡೆದಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆಯುತ್ತಿದೆ. ಅರಣ್ಯ ಇಲಾಖೆಯ ಕೆಲ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿರುವ ಶಂಕೆಯಿದೆ. ಕೂಡಲೇ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.