– ಚಿಕ್ಕಮಗಳೂರು : ಭದ್ರಾ ನದಿಯಲ್ಲಿ ತೇಲಿದ ರುಂಡ ಕತ್ತರಿಸಿದ ಕುರಿಗಳ ಶವ!
– ಕೊಡಗು :ಕಾಡಾನೆ ದಾಳಿಯಿಂದ ವೃದ್ಧೆಯ ಕಾಲು ಮುರಿತ!
– ಗದಗ : ಚಿರತೆ ದಾಳಿಯಿಂದ ನಾಲ್ಕು ಜನರಿಗೆ ಗಾಯ!
– ಬೆಂಗಳೂರು : ಹೆಡ್ ಫೋನ್ ತಂದ ಕುತ್ತು..!
– ಸಕಲೇಶಪುರ : ಇಬ್ಬರ ಮೇಲೆ ಕಾಡಾನೆ ದಾಳಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿ ಭದ್ರಾ ನದಿಯ ದಡದಲ್ಲಿ ಭಾರಿ ಪ್ರಮಾಣದ ವಾಮಾಚಾರ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಭದ್ರಾ ನದಿ ಹೆಬ್ಬಾಳೆ ಸೇತುವೆ ಬಳಿ ಘಟನೆ ನಡೆದಿದೆ. ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ ಮೇಕೆಗಳನ್ನು ಬಲಿ ಕೊಡಲಾಗಿದೆ. ರುಂಡ ಮುಂಡ ಬೇರ್ಪಡಿಸಿದ ಏಳೆಂಟು ಕುರಿ- ಮೇಕೆಗಳ ಶವಗಳು ನದಿಯಲ್ಲಿ ತೇಲುತ್ತಿದ್ದು, ಇದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ನದಿ ದಡದಲ್ಲಿ ವಾಮಾಚಾರಕ್ಕೆ ಬಳಸಿರುವ ವಸ್ತುಗಳು ಕಂಡುಬಂದಿವೆ. ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ, ನಿಂಬೆಹಣ್ಣು, ಕುಂಕುಮ ಇತ್ಯಾದಿ ವಾಮಾಚಾರಕ್ಕೆ ಬಳಸಿದ್ದು ಕಂಡುಬಂದಿದೆ. ತಡರಾತ್ರಿ ವೇಳೆ ಈ ಕೃತ್ಯ ನಡೆದಿದೆ. ಕಳಸ- ಹೊರನಾಡು ತೀರ್ಥಕ್ಷೇತ್ರಗಳಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಕೃತ್ಯ ನಡೆದಿದ್ದು, ಯಾರ ಗಮನಕ್ಕೂ ಬಂದಿಲ್ಲ. ಸ್ಥಳೀಯ ನಿವಾಸಿಗಳಲ್ಲಿ ವಾಮಾಚಾರದ ಬಗ್ಗೆ ಆತಂಕ ಮೂಡಿದ್ದು, ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ನದಿಯಿಂದ ಮೇಕೆಗಳ ಶವ ಹೊರಕ್ಕೆ ತೆಗೆದಿದ್ದಾರೆ. ವಾಮಾಚಾರದ ರಹಸ್ಯ ಭೇದಿಸಲು ಮುಂದಾಗಿದ್ದಾರೆ.
ಕಾಡಾನೆ ದಾಳಿಯಿಂದ ವೃದ್ಧೆಯ ಕಾಲು ಮುರಿತ
ಕೊಡಗು: ಕೊಡಗಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಕಾಡಾನೆ ಅಟ್ಯಾಕ್ ಮಾಡಿದ್ದರಿಂದ ವೃದ್ಧೆಯ ಕಾಲು ಮುರಿದಿದೆ. ಚಿನ್ನೇನಹಳ್ಳಿಯ ವೆಂಕಟಮ್ಮ ಆನೆದಾಳಿಗೆ ಒಳಗಾದ ವಯೋವೃದ್ಧೆ. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕಣಿವೆ ಸಮೀಪದ ಚಿನ್ನೇನಹಳ್ಳಿಯಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ ವೆಂಕಟಮ್ಮ ಬಹಿರ್ದೆಸೆಗೆ ತೆರಳಿದಾಗ ಸಲಗ ದಿಢೀರನೆ ದಾಳಿ ನಡೆಸಿದೆ. ಗಾಯಾಳು ವೆಂಕಟಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಚಿರತೆ ದಾಳಿಯಿಂದ ನಾಲ್ಕು ಜನರಿಗೆ ಗಾಯ
ಗದಗ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ನಾಲ್ಕು ಜನರ ಮೇಲೆ ಅಟ್ಯಾಕ್ ಮಾಡಿ ಗಾಯಗೊಳಿಸಿದೆ. ಜೀಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆಯಷ್ಟೇ ತೋಟದಲ್ಲಿ ಕೆಲಸ ಮಾಡುತ್ತಿದ್ದಾತನ ಮೇಲೆ ದಾಳಿ ಮಾಡಿದ್ದ ಚಿರತೆ, ಸಂಜೆ ವೇಳೆ ಮತ್ತೆ ನಾಲ್ಕು ಜನರ ಮೇಲೆ ದಾಳಿ ನಡೆಸಿದೆ. ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳಿಯರ ಮೇಲೆ ಎರಗಿದೆ. ದಾಳಿಗೊಳಗಾದವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಚಿರತೆ ಸೆರೆ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಚಿರತೆ ದಾಳಿಯಿಂದ ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹೆಡ್ ಫೋನ್ ತಂದ ಕುತ್ತು..!
ಬೆಂಗಳೂರು: ಯುವಕನೊಬ್ಬ ಇಯರ್ಫೋನ್ ಹಾಕೊಂಡು ರೈಲ್ವೇ ಟ್ರ್ಯಾಕ್ ಮೇಲೆ ನಡೀತಿರೋವಾಗ, ರೈಲು ಬಂದು ಡಿಕ್ಕಿ ಹೊಡೆದು, ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಬೆಂಗಳೂರಿನ ಯಲಹಂಕ ಬಳಿ ನಡೆದಿದೆ. ಈತ 19 ವರ್ಷದ ಬಿ ಟೆಕ್ ವಿದ್ಯಾರ್ಥಿ ಶಿವ ಸೂರ್ಯ ಎಂದು ಗುರುತಿಸಲಾಗಿದೆ. ಈತ ಇಯರ್ಫೋನ್ ಧರಿಸಿ ಮ್ಯೂಸಿಕ್ ಕೇಳುತ್ತಿದ್ದ ಕಾರಣವೋ ಅಥವಾ ಮೊಬೈಲ್ನಲ್ಲಿ ಮಾತನಾಡುತಿದ್ದ ಕಾರಣವೋ ರೈಲು ಹತ್ತಿರ ಬಂದ್ರೂ, ಅದರ ಸೌಂಡ್ ಕೇಳದೆ ಈ ಅಪಘಾತ ಸಂಭವಿಸಿರಬಹುದು ಎಂದು ರೈಲ್ವೇ ಪೋಲೀಸರು ಹೇಳಿದ್ದಾರೆ. ಕಿವಿಯಲ್ಲಿ ಇಯರ್ಫೋನ್ ಪ್ಲಗ್ ಇನ್ ಮಾಡಿಕೊಂಡ ಸ್ಥಿತಿಯಲ್ಲೇ ಈತನ ಮೃತದೇಹ ಪತ್ತೆಯಾಗಿದೆ.
ಇಬ್ಬರ ಮೇಲೆ ಕಾಡಾನೆ ದಾಳಿ; ಪರಿಸ್ಥಿತಿ ಚಿಂತಾಜನಕ
ಸಕಲೇಶಪುರ: ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವನ ಪರಿಸ್ಥಿತಿ ಚಿಂತಾಜನಕವಾಗಿದೆ. ತಾಲೂಕಿನ ಹೆಬ್ಬನಹಳ್ಳಿ ಸಮೀಪದ ಲಕ್ಕುಂದದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನಿಂದ ಕೂಲಿ ಕೆಲಸ ಮಾಡಲು ಆಗಮಿಸಿದ್ದ ರಮೇಶ್ (34) ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಮತ್ತೊರ್ವ ಶಾಶ್ವತ (34) ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪಟ್ಟಣದ ಕ್ರಾರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಕಾಡಾನೆ ಹಾಗೂ ಮಾನವ ಸಂಘರ್ಷ ಮತ್ತೆ ಆರಂಭವಾಗಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ.