ಕನ್ನಡ ರಾಜ್ಯೋತ್ಸವಕ್ಕೆ ಎರಡು ಧ್ವಜ, ಎರಡು ಕಂಬ
– ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷರರಿಗೆ ಸಂಕಷ್ಟ
– ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ಆಗಿರುವುದರಿಂದ ಕನ್ನಡ ರಾಜ್ಯೋತ್ಸವ ಕಡ್ಡಾಯವಾಗಿ ಆಚರಣೆ
NAMMUR EXPRESS NEWS
ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನ ಶಾಲೆಗಳಲ್ಲಿ ರಾಷ್ಟ್ರಧ್ವಜ ಹಾಗೂ ನಾಡ (ಕನ್ನಡ) ಧ್ವಜಾರೋಹಣವನ್ನು ಪ್ರತ್ಯೇಕ ಕಂಬಗಳಲ್ಲಿ ನೆರವೇರಿಸಬೇಕು ಎನ್ನುವ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ತುಂಬಿರುವ ಕಾರಣ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸಬೇಕು. ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಲಾಗಿದೆ. ಅಂದು ಬೆಳಿಗ್ಗೆ 8.30ರಿಂದ 9 ರ ಒಳಗೆ ಧ್ವಜಾರೋಹಣ ಮಾಡಬೇಕು. ಮೊದಲು ರಾಷ್ಟ್ರಧ್ವಜಾರೋಹಣ, ನಂತರ ಕನ್ನಡ ಧ್ವಜಾರೋಹಣ ಮಾಡಬೇಕು. ರಾಷ್ಟ್ರಧ್ವಜಕ್ಕಿಂತ ಕನ್ನಡ ಧ್ವಜ ಐದು ಅಡಿ ಕೆಳಗಿರಬೇಕು. ಎರಡು ಧ್ವಜಗಳಿಗೆ ಪ್ರತ್ಯೇಕ ಧ್ವಜಸ್ತಂಭ ಬಳಸಬೇಕು. ಕಬ್ಬಿಣದ ಎಂಎಸ್ ಪೈಪುಗಳನ್ನೇ ಬಳಸಬೇಕು. ಮರದ ಕಂಬ ಬಳಸಬಾರದು ಎಂದು ಇಲಾಖೆಯ ಆಯುಕ್ತರು ಹೇಳಿದ್ದಾರೆ.
ರಾಜ್ಯದಲ್ಲಿ 47,276 ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 72,412 ಶಾಲೆಗಳಿವೆ. ಶೇ 80ರಷ್ಟು ಶಾಲೆಗಳಲ್ಲಿ ಒಂದೇ ಧ್ವಜಸ್ತಂಭವಿದೆ. ಶೇ 20ರಷ್ಟು ಶಾಲೆಗಳಲ್ಲಿ ಒಂದು ಧ್ವಜಸ್ತಂಭವೂ ಇಲ್ಲ. ಇಂತಹ ಸಮಯದಲ್ಲಿ ಮತ್ತೊಂದು ಧ್ವಜಸ್ತಂಭ ಸಿದ್ದಪಡಿಸುವುದು ಕಷ್ಟದ ಕೆಲಸ ಎನ್ನುತ್ತಾರೆ ಹಲವು ಶಾಲೆಗಳ ಮುಖ್ಯ ಶಿಕ್ಷಕರು. ನಮ್ಮ ಶಾಲೆಯಲ್ಲಿ ಒಂದು ಧ್ವಜಸ್ತಂಭಕ್ಕೇ ಜಾಗವಿಲ್ಲ. ಸ್ವಾತಂತ್ರ್ಯದ ದಿನ ಹಾಗೂ ಗಣ ರಾಜ್ಯೋತ್ಸವದಂದು ಶಾಲೆ ಚಾವಣಿಯ ಹೆಂಚು ತೆಗೆದು ಧ್ವಜಾರೋಹಣ ಮಾಡುತ್ತೇವೆ. ಈಗ ಎರಡು ಧ್ವಜಸ್ತಂಭದ ನಿಯಮ ಪಾಲನೆ ಕಷ್ಟ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎನ್ನುತ್ತಾರೆ ಶಿಕ್ಷಕರು.