ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುರು!
– ರಾಜ್ಯದಲ್ಲಿ ಭಾರೀ ಕುತೂಹಲ: ಶಿವಮೊಗ್ಗ ಕ್ಷೇತ್ರ ಅಚ್ಚರಿ
– ಹಲವೆಡೆ ಕೈ ಕೊಟ್ಟ ಮತಯಂತ್ರ: ಹುರುಪಿನಿಂದ ಮತದಾನ
NAMMUR EXPRESS NEWS
ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ, ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಶುರುವಾಗಿದೆ. ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ಮೊದಲ ಎರಡು ಹಂತಗಳ ಮತದಾನ ಮುಗಿದ ನಂತರ, 18 ನೇ ಲೋಕಸಭೆಯ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ, ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಈಗಾಗಲೇ 14 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಇಂದು ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ ಹಲವೆಡೆ ಕೈ ಕೊಟ್ಟ ಮತಯಂತ್ರದಿಂದ ಕೆಲ ಸಮಯ ತಡವಾಗಿದೆ. ಆದ್ರೂ ಜನ ಹುರುಪಿನಿಂದ ಮತದಾನ ಮಾಡುತ್ತಿದ್ದಾರೆ.
ಎಲ್ಲೆಲ್ಲಿ ಮತದಾನ?
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಾಗಿವೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವ ಕಾರಣ, ಬಿಜೆಪಿ ಗೆಲುವು ಕಷ್ಟವಾಗುತ್ತಾ ಎನ್ನುವ ಕುತೂಹಲ ಇದೆ.
ವಿಶೇಷ ಮತಗಟ್ಟೆ ಸ್ಥಾಪನೆ
ದೇಶಾದ್ಯಂತ 3ನೇ ಹಂತ ಹಾಗೂ ಕರ್ನಾಟಕದಲ್ಲಿ 2 ನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಇಂದು(ಮಂಗಳವಾರ) 14 ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರನ್ನ ಮತಗಟ್ಟೆಗಳತ್ತ ಸೆಳೆಯಲು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಗಳು ಪಿಂಕ್ ಬಣ್ಣದ ಸಖಿ ಮತಗಟ್ಟೆ, ಗ್ಲೋಬಲ್ ವಾರ್ಮಿಂಗ್ ವಿಚಾರವಾಗಿ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಮತಗಟ್ಟೆ, ಕಲಬುರಗಿಯ ತೊಗರಿ ಕಣಜದ ಕೃಷಿ ವಿವರಗಳಿರುವ ಮಾಹಿತಿಗಳಿರುವ ಮತಗಟ್ಟೆ ಸೇರಿದಂತೆ ಮತ್ತಿತರ ಮಾಹಿತಿಗಳಿರುವ ಮತಗಟ್ಟೆಗಳನ್ನ ನಿರ್ಮಾಣ ಮಾಡಲಾಗಿದೆ.