ತೀರ್ಥಹಳ್ಳಿಯ ಭೂ ಬ್ಯಾಂಕ್ ಲಾಭದ ಸಾಧನೆ!
– 84 ವರ್ಷಕ್ಕೂ ಹಿಂದೆ ತೀರ್ಥಹಳ್ಳಿ ಅನೇಕ ಹಿರಿಯ ಸಹಕಾರಿಗಳ ನೆರವಿಂದ ಶುರುವಾದ ಸಂಸ್ಥೆ
– ತೀರ್ಥಹಳ್ಳಿ ರೈತರಿಗೆ ಆಸರೆಯಾದ ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್
– ಸಂಸ್ಥೆ ಅಧ್ಯಕ್ಷರಾದ ಬಸವಾನಿ ವಿಜಯ್ ದೇವ್ ಮಾಹಿತಿ
NAMMUR EXPRESS NEWS
ತೀರ್ಥಹಳ್ಳಿ: 84 ವರ್ಷದ ಇತಿಹಾಸದಲ್ಲೇ ತೀರ್ಥಹಳ್ಳಿಯ ಭೂ ಬ್ಯಾಂಕ್ ಎರಡು ಬಾರಿ ಅತ್ಯಂತ ಹೆಚ್ಚು ಲಾಭಗಳಿಸಿದ್ದು,ತೀರ್ಥಹಳ್ಳಿ ಭೂ ಬ್ಯಾಂಕ್ 1 ಕೋಟಿ 1 ಲಕ್ಷ ಕ್ಕೂ ಹೆಚ್ಚು ಲಾಭ ಇದು ಈ ಅವಧಿಯ ಲಾಭ ಪಡೆದಿದೆ.
ಸೋಮವಾರ ಪಿ ಎಲ್ ಡಿ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಬಸವಾನಿ ವಿಜಯ್ ದೇವ್, ಸುಮಾರು 84 ವರ್ಷಕ್ಕೂ ಹಿಂದೆ ತೀರ್ಥಹಳ್ಳಿಯ ಅನೇಕ ಹಿರಿಯ ಸಹಕಾರಿಗಳ ನೆರವು, ಸಹಕಾರ ಹಾಗೂ ಶ್ರಮದಿಂದ ಪ್ರಾರಂಭಗೊಂಡ ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್ ತಾಲ್ಲೂಕಿನ ಬಹುತೇಕ ರೈತರಿಗೆ ಸಕಾಲದಲ್ಲಿ ಸಾಲ ನೀಡಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಭದ್ರತೆ ನೀಡಿದೆ ಎಂದರು.
ಹೊಸ ತೋಟ ನಿರ್ಮಿಸಲು, ಹಳೇ ತೋಟಗಳ ಅಭಿವೃದ್ದಿಗೆ, ಬೇಲಿ ನಿರ್ಮಿಸಲು, ಕೊಟ್ಟಿಗೆ ನಿರ್ಮಾಣಕ್ಕೆ ಸಾಲ ನೀಡಿ ಅಗತ್ಯದ ಹಣಕಾಸು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ತಾಲ್ಲೂಕಿನ ರೈತ ಸಮುದಾಯ ಇಂದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ತೀರ್ಥಹಳ್ಳಿ ಭೂ ಬ್ಯಾಂಕ್ನ ಕೊಡುಗೆ ಬಹುದೊಡ್ಡದು ಎಂದು ಹೇಳಿದರು.
ತೀರ್ಥಹಳ್ಳಿ ಪ್ರಾಥಮಿಕ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕ್ಗೆ ರಾಜ್ಯದ ಭೂಪಟದಲ್ಲಿಯೇ ವಿಶೇಷ ಗೌರವಾಧರಗಳಿವೆ. ಈ ಬ್ಯಾಂಕಿನಿಂದ ರಾಜ್ಯ ಕೃಷಿ ಮತ್ತು ಗ್ರಾಮಿಣಾಭಿವೃದ್ಧಿ ಬ್ಯಾಂಕಿಗೆ ಪ್ರತಿನಿಧಿಯಾಗಿದ್ದ ಬಿ.ಎಸ್.ವಿಶ್ವನಾಥನ್ ವಿಶ್ವ ಸಹಕಾರ ಪಟ್ಟವೇರಲು ತೀರ್ಥಹಳ್ಳಿ ಭೂ ಬ್ಯಾಂಕ್ ಬಹುದೊಡ್ಡ ಮೆಟ್ಟಿಲಾಗಿದೆ. ಬಿ.ಎಸ್.ವಿಶ್ವನಾಥನ್ ರವರ ನಂತರ ತೀರ್ಥಹಳ್ಳಿ ಭೂ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಿಂಹಪಾಲು ಸಲ್ಲಿಸಿದ್ದು ಬಸವಾನಿ ವಿಜಯದೇವ್.ಪ್ರಸ್ತುತ ರಾಜ್ಯ ಬ್ಯಾಂಕಿನ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸುವ ಮೂಲಕ ಬಸವಾನಿ ವಿಜಯದೇವ್ ತಮ್ಮ ನಿರಂತರ ಪ್ರಯತ್ನದ ಮೂಲಕ ಈ ಬ್ಯಾಂಕಿನ ಷೇರುದಾರ ಸದಸ್ಯರುಗಳಿಗೆ ಸಾಲ ನೀಡುವ ಮೂಲಕ ರೈತರ ಬದುಕನ್ನು ಹಸನುಗೊಳಿಸಿದ್ದಾರೆ. ಇತ್ತೀಚಿನ ವರ್ಷಗಳಿಂದ ರಾಜ್ಯದ ಬಹುತೇಕ ಭೂ ಬ್ಯಾಂಕ್ ಗಳು ರೈತರಿಗೆ ಸಾಲ ನೀಡಲಾಗದೇ ಸಂಪೂರ್ಣ ನೆಲಕಚ್ಚಿರುವ ಈ ಸಂದರ್ಭದಲ್ಲಿ ತೀರ್ಥಹಳ್ಳಿ ಭೂ ಬ್ಯಾಂಕ್ ರೈತರಿಗೆ ಕೃಷಿ ಸಾಲ ನೀಡುವುದರ ಮೂಲಕ ಪ್ರತೀ ವರ್ಷವೂ ಸಾಧನೆಯ ಉತ್ತುಂಗಕ್ಕೆ ಏರುತ್ತಿದೆ ಎಂದರು.
ರಾಜ್ಯ ಬ್ಯಾಂಕಿನ ಬೆಳವಣಿಗೆಗೆ ಹಲವು ಪ್ರಾಥಮಿಕ ಬ್ಯಾಂಕುಗಳು ಕೈಜೋಡಿಸಿದ್ದು ತೀರ್ಥಹಳ್ಳಿ ಭೂ ಅಭಿವೃದ್ಧಿ ಬ್ಯಾಂಕ್ ಈ ಸಾಲಿನಲ್ಲಿ ಮುಂಚೂಣಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಕಳೆದ ಹಲವು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ತೀರ್ಥಹಳ್ಳಿ ಬ್ಯಾಂಕ್, ರಾಜ್ಯಮಟ್ಟದಲ್ಲೂ ಅತ್ಯುತ್ತಮ ಬ್ಯಾಂಕ್ಗಳಲ್ಲಿ ಒಂದಾಗಿದ್ದು ನಬಾರ್ಡ್ ಪುರಸ್ಕೃತ ಪ್ರಾಥಮಿಕ, ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ನಿರಂತರ ಉಳಿಸಿಕೊಂಡು ಬಂದಿದೆ ಎಂದರು.
ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಸಾಧನೆ
ಸಹಕಾರಿ ರತ್ನ, ಹಿರಿಯ ಸಹಕಾರಿ ಶ್ರೀ ಬಸವಾನಿ ವಿಜಯದೇವ್ ಅಧ್ಯಕ್ಷರಾಗಿರುವ ತೀರ್ಥಹಳ್ಳಿ ಪಿಕಾರ್ಡ್ ಬ್ಯಾಂಕ್, 2023-2024 ನೇ ಸಾಲಿನಲ್ಲಿ 1 ಕೋಟಿ 1 ಲಕ್ಷದ 76 ಸಾವಿರ ರೂಪಾಯಿಗಳಿಗೂ ಮಿಕ್ಕಿ ಲಾಭಗಳಿಸಿದ್ದು ಕಳೆದ ವರ್ಷ ಶೇ. 10% ಡೆವಿಡೆಂಟ್ ಹಂಚಿಕೆ ಮಾಡಿದ್ದು ಈ ವರ್ಷವೂ ಶೇಕಡ 10% ರ ಡೆವಿಡೆಂಟ್ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ.
ಪ್ರಕೃತಿ ವೈಪರಿತ್ಯ,ಅನಾವೃಷ್ಟಿ, ಕೊಳೆ ರೋಗ ಮತ್ತು ಎಲೆ ಚುಕ್ಕೆ ರೋಗದಂತಹ ಸಮಸ್ಯೆಯಿಂದ ಆರ್ಥಿಕ ಅಸಮತೋಲನಗಳ ನಡುವೆಯೂ ಸಾಲ ಪಡೆದ ರೈತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದ ಕೆಲವೇ ಲಾಭಗಳಿಸಿರುವ ಭೂ ಬ್ಯಾಂಕ್ಗಳಲ್ಲಿ ಒಂದಾಗಿ ಗಮನ ಸೆಳೆದಿದೆ.
ಒಟ್ಟು 5,315 ಷೇರುದಾರರಿರುವ ಈ ಬ್ಯಾಂಕ್ ವಿವಿಧ ಯೋಜನೆಗಳಿಂದ ಬಹುಪಾಲು ಷೇರುದಾರರಿಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುತ್ತಾ ಬಂದಿದೆ. ಕಳೆದ 18 ವರ್ಷಗಳಿಂದ ಆಡಿಟ್ ತಪಾಸಣೆಯಲ್ಲಿ “ಎ” ಗ್ರೇಡ್ ಪಡೆದಿರುವ ತೀರ್ಥಹಳ್ಳಿ ಭೂ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ ಶೇಕಡ 83.84% ವಸೂಲಾತಿ ಮಾಡಿ 33.72 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ನಡೆಸಿದೆ. ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡದೇ ನಿರಂತರ ಸುಸ್ತಿದಾರರಾದ ಸಾಲಗಾರ ಸದಸ್ಯರ ಮೇಲೆ ದಾವೆ ಹೂಡಲಾಗಿದೆ.
ವಿಜಯ್ ದೇವ್ ಸಾರಥಿಯಾಗಿ ಸೇವೆ
ಹಿರಿಯ ಸಹಕಾರಿ ಶ್ರೀ ಬಸವಾನಿ ವಿಜಯದೇವ್ ಅಧ್ಯಕ್ಷರಾದ ನಂತರ ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆ ಆಗುವಲ್ಲಿ ನಿರಂತರ ಶ್ರಮಿಸಲಾಗುತ್ತಿದ್ದು ವಿವಿಧ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ-ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕರಿಸುತ್ತಿರುವುದಕ್ಕೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಸವಾನಿ ವಿಜಯದೇವ್ ಸಂತಸ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಸರ್ವ ಸದಸ್ಯರ ಮಹಾಸಭೆ
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಬ್ಯಾಂಕಿನ ಸರ್ವ ಸದಸ್ಯರ ಮಹಾಸಭೆ ನಡೆಯಲಿದ್ದು ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಅಧ್ಯಕ್ಷರು ವಿನಂತಿಸಿದ್ದಾರೆ. ಈ ವರ್ಷವು ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮ ನಡೆಸುತ್ತಿದ್ದು ಶೈಕ್ಷಣಿಕ ಕ್ಷೇತ್ರದಲ್ಲೂ ಬ್ಯಾಂಕ್ ತನ್ನ ಸಹಕಾರ ಹಸ್ತ ಚಾಚುವ ಪ್ರಯತ್ನ ಮುಂದುವರಿಸಿದೆ.
ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಕೊಡಸಗೊಳ್ಳಿ ಸತೀಶ್,ಹಿಂದಿನ ಅವಧಿಯ ವ್ಯವಸ್ಥಾಪಕರಾದ ಶ್ರೀ ಕೆ ಕೃಷ್ಣಮೂರ್ತಿ,ಹಾಲಿ ವ್ಯವಸ್ಥಾಪಕರಾದ ಸಂಜಯ್, ಬ್ಯಾಂಕಿನ ನಿರ್ದೇಶಕರು, ನೌಕರ ಬಳಗ ಮುಖ್ಯವಾಗಿ ಷೇರುದಾರರ ನಿರಂತರ ಸಹಕಾರದಿಂದ ತೀರ್ಥಹಳ್ಳಿ ಭೂ ಬ್ಯಾಂಕ್ ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಧ್ಯಕ್ಷ ಶ್ರೀ ಬಸವಾನಿ ವಿಜಯದೇವ್ ಕೃತಜ್ಞತೆ ಸಲ್ಲಿಸಿದ್ದಾರೆ. ಬಸವಾನಿ ವಿಜಯದೇವ್, ಹಿಂದಿನ ಅವಧಿಯ ವ್ಯವಸ್ಥಾಪಕರಾದ ಕೆ, ಕೃಷ್ಣಮೂರ್ತಿ ಹಾಗೂ ಹಾಲಿ ವ್ಯವಸ್ಥಾಪಕರಾದ ಸಂಜಯ್ ಉಪಸ್ಥಿತರಿದ್ದರು.