10ನೇ ಬಾರಿ ಕುರ್ಚಿ ಹಿಡಿದ ಡಾ.ಮಂಜುನಾಥ ಗೌಡ!
– ಆರನೇ ಬಾರಿಗೆ ಡಿಸಿಸಿ ಬ್ಯಾಂಕಿಗೆ ಅವಿರೋಧ ಆಯ್ಕೆ
– ಹಳ್ಳಿ ಹಳ್ಳಿಗಳಲ್ಲೂ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ಲಾನ್
– ನನ್ನ ವಿರೋಧಿಗಳಿಗೂ ನನ್ನ ಧನ್ಯವಾದ..!
NAMMUR EXPRESS NEWS
ತೀರ್ಥಹಳ್ಳಿ: ಸಹಕಾರಿ ನಾಯಕ ಡಾ. ಅರ್. ಎಂ.ಮಂಜುನಾಥ ಗೌಡ ಆರನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಅಲಂಕರಿಸಿದ್ದಾರೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಒಂದು ಹೊಸ ಕಳೆ ಆರಂಭವಾಗಿದೆ ಸಹಕಾರಿ ಕ್ಷೇತ್ರಗಳಲ್ಲಿ ಪ್ರಮುಖ ನಾಯಕರಾಗಿರುವಂತಹ ಮಂಜುನಾಥಗೌಡ ಅವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುತ್ತಿದ್ದ ಹಿನ್ನೆಲೆಯಲ್ಲಿ 5000ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಮುಖಂಡರು, ಪ್ರಮುಖರು ಶಿವಮೊಗ್ಗದಲ್ಲಿ ಶುಕ್ರವಾರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತೀರ್ಥಹಳ್ಳಿಯಲ್ಲೂ ಕೂಡ ಅಭಿನಂದನೆ ಕಾರ್ಯಕ್ರಮ ಶೀಘ್ರದಲ್ಲಿ ಆಯೋಜನೆ ಮಾಡಲಾಗುತ್ತದೆ. ಡಾ.ಆರ್ ಎಂ ಮಂಜುನಾಥ ಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಳ್ಳಿ ಹಳ್ಳಿಗಳಲ್ಲೂ ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಿದರು. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಂದು ಅವಕಾಶ ದೊರೆತಿದೆ.
ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆ
ಶಿವಮೊಗ್ಗ ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಹೊಸ ಶಾಖೆಗಳನ್ನು ಆರಂಭಿಸುವುದಾಗಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳ ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ಆಡಳಿತ ಮಂಡಳಿ ಸೇರಿದಂತೆ ಸಹಕಾರಿ ವಲಯದಿಂದ ನಿರೀಕ್ಷೆಗೂ ಮೀರಿದ ಪ್ರೀತಿ, ವಿಶ್ವಾಸ, ಬೆಂಬಲ ವ್ಯಕ್ತವಾಗಿದೆ. ಸಹಕಾರ ಕ್ಷೇತ್ರದ ಶಕ್ತಿ ಅನಾವರಣ ಆಗಿದೆ. ಬಹಳಷ್ಟು ಜನರು ಆರ್.ಎಂ. ಮಂಜುನಾಥ ಗೌಡ ಅವರನ್ನು ಸಹಕಾರ ಕ್ಷೇತ್ರದಿಂದ ತೆಗೆಯಬೇಕೆಂದು ಪ್ರಯತ್ನ ನಡೆಸಿದ್ದರು. ಆದರೆ, ಸಹಕಾರಿಗಳು ತೋರಿದ ಪ್ರೀತಿ ವಿಶ್ವಾಸದಿಂದ ಮತ್ತೆ ಅಧ್ಯಕ್ಷನಾಗಿದ್ದೇನೆ. ನನ್ನ ಜವಾಬ್ದಾರಿ ಹೆಚ್ಚಾಗಿದ್ದು, ಅದನ್ನು ನಿಭಾಯಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂದಿನ ಐದು ವರ್ಷಗಳ ಅವಧಿಗೆ ಡಿಸಿಸಿ ಬ್ಯಾಂಕ್ ಜೊತೆಗಿರುವ ಒಂದು ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು, 174 ಪ್ರಾಥಮಿಕ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಂಘಗಳು, ಆದ್ಯತಾ ಕ್ಷೇತ್ರವಾದ ಸ್ವಸಹಾಯ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಐದು ದಿನಗಳಲ್ಲಿ ಯೋಜನಾ ವರದಿಯನ್ನು ನಿಮ್ಮ ಮುಂದಿಡುತ್ತೇನೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡಬಹುದಾದ ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು. ಪ್ರಾಥಮಿಕ ಸಹಕಾರ ಕೇಂದ್ರ ಗಳನ್ನು ಬಹುಉದ್ದೇಶಿತ ಸೇವಾ ಕೇಂದ್ರಗಳಾಗಿ ಬದಲಾವಣೆ ಮಾಡಲಿದ್ದು, ಒಂದೇ ಸೂರಿನಡಿ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಾದ ಎಲ್ಲಾ ಸೇವೆಗಳು ಲಭ್ಯ ಇರುತ್ತವೆ. ಗೊಬ್ಬರ, ಬೀಜ, ಸಿಮೆಂಟ್, ಪರಿಕರಗಳು, ಬೆಳೆ ಮಾರಾಟ ವ್ಯವಸ್ಥೆ ಮೊದಲಾದವುಗಳನ್ನು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಕಲ್ಪಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಕೂಡ ಸಹಕಾರ ಕ್ಷೇತ್ರಕ್ಕೆ ಅಗತ್ಯ ನೆರವು ಕಲ್ಪಿಸಿದೆ. ಪ್ರಾಥಮಿಕ ಸಹಕಾರ ಸಂಘಗಳಿಗೆ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಬಂಕ್ ತೆರೆಯಲು ಅವಕಾಶ ಕಲ್ಪಿಸುತ್ತಿದೆ. ಸಾಮಾನ್ಯ ಸೇವಾ ಕೇಂದ್ರಗಳಾಗಿ ಪರಿವರ್ತಿಸಲು
ಮುಂದಾಗಿದೆ. ಜನ ಔಷಧಿ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಸೂಪರ್ ಮಾರ್ಕೆಟ್ ಗಳ ರೀತಿಯೂ ಪ್ರಾಥಮಿಕ ಸಹಕಾರ ಸಂಘಗಳು ಕಾರ್ಯನಿರ್ವಹಿಸಲಿದ್ದು, ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳು ಲಭ್ಯ ಇರುತ್ತವೆ. ಎಂದರು. ಅದಕ್ಕಿಂತ ಮೊದಲು ಕಟ್ಟಡಗಳು ಇಲ್ಲದ ಪ್ರಾಥಮಿಕ ಸಹಕಾರ ಸಂಘಗಳಿಗೆ ಸರ್ಕಾರದಿಂದ ನೆರವು ಪಡೆಯದೆ ಕಟ್ಟಡ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಇನ್ನೂ ಐದು ವರ್ಷಗಳಲ್ಲಿ ನಮ್ಮ ವರ್ಕಿಂಗ್ ಕ್ಯಾಪಿಟಲ್ 5000 ಕೋಟಿ ರೂಪಾಯಿ ಮುಟ್ಟಿದರೆ ಜಿಲ್ಲೆಯಲ್ಲಿ ಬೇರೆ ವಾಣಿಜ್ಯ ಬ್ಯಾಂಕುಗಳಿಂದ ನಾವು ಮುಂದಿರುತ್ತೇವೆ ಎಂದು ತಿಳಿಸಿದರು.