ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗ್ರಾಪಂ ಭ್ರಷ್ಟಾಚಾರ!
– ಯಾವುದಕ್ಕೋ ಇಟ್ಟ ಹಣ ಇನ್ಯಾವುದಕ್ಕೋ ದುರ್ಬಳಕೆ
– ಕಾಮಗಾರಿ ನಡೆಸದೇ ಸುಮಾರು ₹2.61 ಲಕ್ಷ ಹಣ ದುರುಪಯೋಗ?
– ಸಚಿವ ಪ್ರಿಯಾಂಕಾ ಖರ್ಗೆಗೆ ದೂರು: ಶೀಘ್ರದಲ್ಲಿ ತನಿಖೆ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದು, ಯಾವುದಕ್ಕೋ ಇಟ್ಟ ಹಣವನ್ನು ಇನ್ಯಾವುದಕ್ಕೋ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಸಧ್ಯ ಸ್ಥಳೀಯ ಮಟ್ಟದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ದೂರೊಂದು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಕಛೇರಿ ತಲುಪಿದೆ.
ತೀರ್ಥಹಳ್ಳಿ ತಾಲ್ಲೂಕಿನ ಹೆಚ್ಚು ಉತ್ಪತ್ತಿ ಬರುವ ಮತ್ತು ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲೊಂದು. ಇಲ್ಲಿ ಅಧಿಕಾರ ಹಿಡಿಯಲು ಸ್ಥಳಿಯ ಮಟ್ಟದಲ್ಲಿ ಅದೆಷ್ಟು ಲಾಭಿ ನಡೆಯುತ್ತದೆ ಎಂದರೆ ಗ್ರಾಮ ಪಂಚಾಯಿತಿಯ ವಾರ್ಡ್ ಮಟ್ಟದ ಚುನಾವಣೆಯಲ್ಲೇ ವಿಧಾನಸಭಾ ಚುನಾವಣೆಯನ್ನೂ ನಾಚುವಂತೆ ಲಕ್ಷಗಟ್ಟಲೆ ಹಣವನ್ನು ನೀರಿನಂತೆ ಸುರಿದು ಅಧಿಕಾರ ಹಿಡಿಯುವವರು ಇಲ್ಲಿದ್ದಾರೆ.
ಅನುದಾನದ ವಿಚಾರಕ್ಕೆ ಬಂದರೂ ಬೆಜ್ಜವಳ್ಳಿ ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುಧಾನಗಳನ್ನೂ ಪಡೆಯುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಇಂತಿಪ್ಪ ಈ ಪಂಚಾಯಿತಿಯ ಆಡಳಿತದ ಬಗ್ಗೆ ಹಿಂದಿನಿಂದಲೂ ದೂರುಗಳು ಕೇಳಿ ಬರುತ್ತಿತ್ತು. ಆದರೆ ಈಗ ಇಲ್ಲಿನ ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ ನಾಯ್ಕ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಏನಿದು ಪ್ರಕರಣ?:
ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಗೆ 2022-23 ನೇ ಸಾಲಿನ ಹಣಕಾಸು ವರ್ಷದಲ್ಲಿ ನೈರ್ಮಲ್ಯ ಕಾಮಗಾರಿಗಳಿಗೆ ಬಿಡುಗಡೆಯಾಗಿ ಮೀಸಲಿಟ್ಟ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿದ ಬಗ್ಗೆ ಆರೋಪ ಕೇಳಿ ಬಂದಿದೆ. ಅದರಲ್ಲೂ ಯಾವುದೇ ಕಾಮಗಾರಿ ನಡೆಸದೇ ಸುಮಾರು ₹2.61 ಲಕ್ಷ ಹಣವನ್ನು ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ್ ನಾಯ್ಕ್ ಕಡೆಯಿಂದ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
₹2.61 ಲಕ್ಷ ಹಣವನ್ನು ಕ್ರಮವಾಗಿ ₹1.86 ಲಕ್ಷ, ₹50,000 ಮತ್ತು ₹25,000 ಹಣವನ್ನು ಖಾಸಗಿ ವ್ಯಕ್ತಿಗಳಿಗೆ ದಿನಾಂಕ 8.06.23 ರಂದು ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿರುತ್ತಾರೆ. ಇಲ್ಲಿ ಬಿಡುಗಡೆಯಾದ ಹಣ ಯಾವುದೇ ಕಾಮಗಾರಿ ಉದ್ದೇಶದಿಂದಲೋ ಅಥವಾ ಕಾಮಗಾರಿ ಪೂರ್ಣಗೊಳಿಸಿದ ಕಾರಣಕ್ಕೋ ವರ್ಗಾವಣೆ ಆಗಿಲ್ಲ ಎಂಬುದು ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ. ನಿಯಮಗಳಂತೆ ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ಎಂ.ಬಿ.ದಾಖಲಿಸದೇ ಹಣ ಬಿಡುಗಡೆ ಮಾಡುವ ಅವಕಾಶ ಇರುವುದಿಲ್ಲ. ಆದರೆ ಇಲ್ಲಿ ಭರ್ತಿ ₹2.61 ಲಕ್ಷ ಹಣ ಸಂಪೂರ್ಣ ದುರುಪಯೋಗವಾಗಿದೆ, ಖಾಸಗಿ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡಿ ಸರ್ಕಾರದ ಹಣ ದುರ್ಬಳಕೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ತೀರ್ಥಹಳ್ಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಿದಾಗ, ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ್ ನಾಯ್ಕ್ ಮೇಲೆ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಅನುಮತಿ ಇಲ್ಲದೇ ಸಂಬಂಧಪಡದ ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾಯಿಸುವುದು ಕಾನೂನು ಬಾಹಿರ. ಮುಂದಿನ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಸಾರ್ವಜನಿಕ ಅಭಿಪ್ರಾಯ ಬದಿಗಿರಲಿ, ಈ ವ್ಯಕ್ತಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರುಗಳನ್ನೂ ವಿಶ್ವಾಸಕ್ಕೆ
ತೆಗೆದುಕೊಳ್ಳದೇ ಉದ್ದಟತನ ತೋರುತ್ತಾರೆ ಎಂಬುದು ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಅಭಿಪ್ರಾಯ. ಒಂದು ರೀತಿ ತಾನು ಆಡಿದ್ದೇ ಆಟ ಎಂಬಂತೆ ಗಂಗಾಧರ್ ನಾಯ್ಕ್ ಅವರ ನಡೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಕೆಲವೇ ದಿನಗಳ ಹಿಂದೆ ತಮ್ಮ ಪ್ರೋಗ್ರೆಸ್ ಪಟ್ಟಿ ಬಿಡುಗಡೆ ಮಾಡಿದ್ದರು. ಇಂತಹ ಪ್ರಕರಣಗಳು ಇದೊಂದು ಪಂಚಾಯಿತಿ ಅಂತಲ್ಲ.. ರಾಜ್ಯದ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಇಂತಹ ಅವಾಂತರಗಳು ಪ್ರತಿ ದಿನದಂತೆ ನಡೆಯುತ್ತಿವೆ. ಈ ಪ್ರಕರಣವೂ ಸೇರಿದಂತೆ ಮುಂದೆ ಆಗುವಂತಹ ಅವ್ಯವಸ್ಥೆಗೆ ಸಚಿವಾಲಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದೇ ಎಂಬುದನ್ನು ಕಾದು ನೋಡಬೇಕು
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023