ಹಣಗೆರೆ ದೇವಸ್ಥಾನದಲ್ಲಿ ಹುಂಡಿ ಗೋಲ್ಮಾಲ್?!
* ದೇವಸ್ಥಾನದ ಹುಂಡಿ ಹಣ ಎಣಿಕೆಯಲ್ಲಿ ಹಣ ವ್ಯತ್ಯಾಸ
* ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ನೇತೃತ್ವದಲ್ಲಿ ಹದ್ದಿನಗಣ್ಣು
* ಕೋಟಿ ಕೋಟಿ ಹಣ ಬರುತ್ತೆ ಕಾಣಿಕೆ: ಅಭಿವೃದ್ಧಿ ಮಾತ್ರ ಇಲ್ಲ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಧಾರ್ಮಿಕ ಸೌಹಾರ್ದ ಕೇಂದ್ರ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಹಣ ಎಣಿಕೆಯಲ್ಲಿ ಮೋಸ ಆಗುತ್ತಿದೆ ಎಂಬ ದೂರಿನ ನಡುವೆ ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಹದ್ದಿನಗಣ್ಣಿಟ್ಟಿದ್ದಾರೆ. ದೇವಸ್ಥಾನದ ಹುಂಡಿಯಲ್ಲೂ ಹಣ ಎಣಿಕೆಯಲ್ಲಿ ಭಾರಿ ಪ್ರಮಾಣದ ಮೋಸ ನಡೆಯುತ್ತಿದ್ದು, ಬ್ಯಾಂಕ್ ಸಿಬ್ಬಂದಿಗಳ, ಅಧಿಕಾರಿಗಳ, ಸಮಿತಿ ವರ್ಗದವರ ಮೇಲೆ ಗ್ರಾಮಸ್ಥರಲ್ಲಿ ಶಂಕೆ ಮೂಡಿದೆ. ಈ ಹಿನ್ನೆಲೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ವಾರ್ಷಿಕವಾಗಿ 2 ಕೋಟಿ ರೂಪಾಯಿಗೂ ಹೆಚ್ಚು ಹುಂಡಿ ಹಣ ಹಣಗೆರೆ ಮುಜರಾಯಿ ದೇವಸ್ಥಾನದಲ್ಲಿ ಸಂಗ್ರಹವಾಗುತ್ತಿದ್ದು, ತ್ರೈಮಾಸಿಕ ಎಣಿಕೆಯಲ್ಲಿ ಸರಾಸರಿ 50 ಲಕ್ಷ ಹಣ ಸಂಗ್ರಹಣೆಯಾಗುತ್ತಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಹುಂಡಿಹಣ ಸಂಗ್ರಹವಾಗುವ ಮುಜರಾಯಿ ದೇವಸ್ಥಾನಗಳಲ್ಲಿ ಹಣಗೆರೆ ಕೂಡ ಒಂದು. ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಹುಂಡಿ ಎಣಿಕೆ ಕಾರ್ಯಾಚರಣೆಯಲ್ಲಿದೆ. ಅದಕ್ಕೆ ತಕ್ಕಂತೆ ಒಂದು ಲಕ್ಷ ಮೌಲ್ಯದ ಹಣದ ಕಟ್ಟುಗಳನ್ನು ಎಣಿಸಿದಾಗ ಹೆಚ್ಚುವರಿ ಹಣ ಇರುವುದು ಪತ್ತೆಯಾಗಿದೆ. ಒಂದು ಲಕ್ಷ ಕಟ್ಟಿನೊಳಗೆ 2, 3, 4 ಸಾವಿರಕ್ಕೂ ಹೆಚ್ಚು ಹಣ ಲಭ್ಯವಾಗಿದೆ.
ಇಂತಹ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಹಣಗೆರೆ ಹುಂಡಿ ಎಣಿಕೆಗೆ ಹೋಗಿದ್ದ ತಹಶೀಲ್ದಾರ್ ದಂಧೆಯ ಕರಾಳತೆ ತಿಳಿಯುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ. ದಂಧೆಯ ಬಗ್ಗೆ ಏನೇನು ಗೊತ್ತಿರದಿದ್ದರೂ ತಂಡದ ನೇತೃತ್ವ ವಹಿಸಿಕೊಂಡ ತಹಶೀಲ್ದಾರ್ ಪ್ರಕರಣವನ್ನು ಹೇಗೆ ಬೇಧಿಸಬೇಕು ಎಂಬ ಸುಳಿಗೆ ಸಿಲುಕಿದಂತಿದೆ.
ಹಲವಾರು ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಜಾಂಡಾ ಹೊಡೆದುಕೊಂಡು ದಂಧೆಯ ವ್ಯೂಹ ಇದೀಗ ಬಯಲಾಗುವ ಸಾಧ್ಯತೆ ಇದೆ. ಹತ್ತು ರೂಪಾಯಿ ನೋಟಿನಿಂದ ಹಿಡಿದು 500 ರೂಪಾಯಿ ನೋಟಿನ ವರೆಗೆ ಹಣ ಇರುವುದರಿಂದ ನಿರೀಕ್ಷೆಯಂತೆ ನೋಟುಗಳನ್ನು ನೋಡಿ ಹಣವನ್ನು ಅಂದಾಜು ಮಾಡುವುದು ಬಹಳ ಕಷ್ಟದ ಸಂಗತಿ.
ಹಣವನ್ನು ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು, ಅಧಿಕಾರಿಗಳು, ಜನ ಪ್ರತಿನಿಧಿನಿಗಳ ನೇತೃತ್ವದಲ್ಲಿ ನ. 8ರಂದು ಹೆಚ್ಚುವರಿ ಹಣವನ್ನು ಮರುಎಣಿಕೆ ಮಾಡಲಾಗುತ್ತಿದೆ.