ತೂದೂರಿಂದ ಕೋಟಿ ವೃಕ್ಷ ಅಭಿಯಾನ ಶುರು!
– ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಚಾಲನೆ
– ಗ್ರಾಮಾಡಳಿತದಿಂದ ನೈಸರ್ಗಿಕ ಅರಣ್ಯ ವೃದ್ಧಿಗೆ ಕ್ರಮ
– ಅಕೇಶಿಯಾ ನಿರ್ಮೂಲನೆಗೆ ಮುಂದಾದ ಗ್ರಾಪಂ
NAMMUR EXPRESS NEWS
ತೀರ್ಥಹಳ್ಳಿ: ನೈಸರ್ಗಿಕ ಅರಣ್ಯಕ್ಕೆ ಕಂಟಕವಾಗಿರುವ ಅಕೇಶಿಯಾ ನೆಡುತೋಪು ನಿರ್ಮೂಲನೆಗೆ ತೂದೂರು ಗ್ರಾಮ ಪಂಚಾಯಿತಿ ಮುಂದಾಗಿದ್ದು ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಂಡಿದೆ.
ಶನಿವಾರ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಮೂಡ್ಲು-ಹೊಸ್ಕೆರೆ ಗ್ರಾಮದಲ್ಲಿ ಗಿಡನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು.
ಗ್ರಾಮಸ್ತರು, ಯುವಕರು, ಮಹಿಳೆಯರು ಹಾಗೂ ಪರಿಸರ ಪ್ರೇಮಿಗಳು ಸುಮಾರು ಮೂರು ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸಸಿ ನೆಡುವ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಗಿಡಗಳ ಸಂರಕ್ಷಣೆಗೆ ಗ್ರಾಮಾಡಳಿತ, ಪರಿಸರ ಪ್ರೇಮಿಗಳು ಸುತ್ತಮುತ್ತಲು ಬೀಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮದ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ದೂಪದ ಮರ ಬೆಳೆಸುವ ದೂರದೃಷ್ಟಿಯನ್ನು ಹೊಂದಿದ್ದಾರೆ.
ಮಲೆನಾಡಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಅಕೇಶಿಯಾ ನೆಡುತೋಪು ಇದೆ. ಏಕಜಾತಿಯ ಮರಗಳು ಎಲ್ಲೆಡೆ ಆವರಿಸಿಕೊಳ್ಳುತ್ತಿದ್ದು ಜೈವಿಕ ವೈವಿಧ್ಯತೆ ನಾಶಪಡಿಸಿದೆ. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಇದೀಗ ತೂದೂರು ಗ್ರಾಮ ಪಂಚಾಯಿತಿ ಹಮ್ಮಿಕೊಂಡಿರುವ ಕೋಟಿವೃಕ್ಷ ಆಂದೋಲನ ಹೊಸ ಭರವಸೆ ಸೃಷ್ಟಿಸಿದೆ.
ಪಶ್ಚಿಮಘಟ್ಟ ಅರಣ್ಯೇತರ ಚಟುವಟಿಕೆಯಿಂದ ಅಪಾಯಕ್ಕೆ ಸಿಲುಕಿದೆ. ಪಾರಂಪರಿಕ ಅರಣ್ಯ ಪರಿಸರ ಸಂರಕ್ಷಣೆ ಆದ್ಯತೆ ನೀಡುವ ಉದ್ದೇಶದಲ್ಲಿ ಅಕೇಶಿಯಾ ಸಸಿ ನೆಡದಂತೆ ಸರ್ಕಾರ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿ ಕೆಎಫ್ಡಿಸಿ ಅಕೇಶಿಯಾ ಬೆಳೆಯಲು ಮುಂದಾಗಿದೆ ಎಂದು ಆರೋಪಿಸಿ ಈಚೆಗೆ ಗ್ರಾಮ ಪಂಚಾಯಿತಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಪುನಃ ಅಕೇಶಿಯಾ ನೆಡುತೋಪಿಗೆ ಅವಕಾಶ ನೀಡುವುದಿಲ್ಲ. ಅರಣ್ಯ ಇಲಾಖೆ, ಅರಣ್ಯ ಅಭಿವೃದ್ಧಿ ನಿಗಮ ಜೈವಿಕ ವೈವಿದ್ಯತೆ ದೃಷ್ಟಿಯಿಂದ ಗ್ರಾಮ ಔಷಧ ವನ ನಿರ್ಮಿಸಬೇಕು ಎಂದು ಆಗ್ರಹಿಸಿತ್ತು.
ಗ್ರಾಮಸ್ತರ ಬೇಡಿಕೆಯಂತೆ ಇದೀಗ ಬೇವು, ನೇರಳೆ, ಸಂಪಿಗೆ, ನಾಗ ಸಂಪಿಗೆ, ನಾಗಲಿಂಗಪುಷ್ಪ, ಪನ್ನೇರೆಳೆ, ದೂಪ, ನೆಲ್ಲಿ, ಬನ್ನಿ, ಮುತ್ತುಗ, ಪುನರ್ಪುಳಿ, ಬಿದಿರು, ರಕ್ತ ಚಂದನ, ಮೊಟ್ಟೆ ಹಣ್ಣು, ಹಲಸು, ಹೆಬ್ಬಲಸು ಮುಂತಾದ ಗಿಡಗಳನ್ನು ಅರಣ್ಯ ಇಲಾಖೆ, ಕೆಎಫ್ಡಿಸಿ ಸಹಯೋಗದಲ್ಲಿ ನೆಡಲಾಗಿದೆ.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಹಾಗೂ ಮುಖಂಡರುಗಳು ಇದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಮಧುರಾಜ್ ಹೆಗ್ಡೆ ಹೇಳಿದ್ದೇನು?
ಅಕೇಶಿಯಾ ನೆಡುತೋಪಿನಿಂದ ಅಂತರ್ಜಲದ ಪ್ರಮಾಣ ತೀವ್ರ ಕುಸಿತ ಕಂಡಿದೆ. ಪಶು, ಪ್ರಾಣಿ, ಪಕ್ಷಿಗಳಿಗೆ ನೈಸರ್ಗಿಕವಾಗಿ ಆಹಾರ ಲಭ್ಯವಾಗುತ್ತಿಲ್ಲ. ಪಕ್ಷಿಗಳ ಗೂಡು ಕಟ್ಟಲು ಕೂಡ ಅಕೇಶಿಯಾ ಸಹಕಾರಿಯಾಗದ ಹಿನ್ನಲೆಯಲ್ಲಿ ಗ್ರಾಮಸ್ತರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿ ಈ ಬಗ್ಗೆ ನಿರ್ಣಯ ಕೈಗೊಂಡು ಗ್ರಾಮದ ಏಳಿಗೆಗೆ ಏಕಜಾತಿ ನೆಡುತೋಪು ನಿರ್ಮಾಣಕ್ಕೆ ನಿರ್ಬಂಧಿಸಿದೆ. ಅಕೇಶಿಯಾ ನೆಡುವುದನ್ನು ವಿರೋಧಿಸಿ ಕೋಟಿವೃಕ್ಷ ಆಂದೋಲನ ಹಮ್ಮಿಕೊಂಡಿದ್ದೇವೆ ಎಂದು ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುರಾಜ ಹೆಗ್ಡೆ ಹೇಳಿದರು.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023