ತೀರ್ಥಹಳ್ಳಿಯಲ್ಲಿ ಹಲವು ದುರಂತ!
– ಮೀನು ಹಿಡಿಯಲು ಹೋಗಿ ಅಪಘಾತ: ಯುವಕ ಸಾವು
– ತೀರ್ಥಹಳ್ಳಿಯ ಶಂಕರಮನೆ ಬಳಿ ನಡೆದಿದ್ದ ಅಪಘಾತ: ಮಣಿಪಾಲ ಆಸ್ಪತ್ರೆಯಲ್ಲಿ ಸಾವು
– ಓವರ್ ಸ್ಪೀಡ್ ಚಲಿಸುತ್ತಿದ್ದ ಕಾರ್ ಪಲ್ಟಿ: ಮೇಗರವಳ್ಳಿಯಲ್ಲಿ ಘಟನೆ
– ಕೆಳಕೊಪ್ಪ: ವಿದ್ಯುತ್ ಶಾಕ್: ಜಾನುವಾರುಗಳು ಸಾವು
– ನಂಟೂರು ಗ್ರಾಮದಲ್ಲಿ ಕುಸಿದಮನೆ: ಓರ್ವ ಪಾರು
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಶಂಕರಮನೆ ಬಳಿ ಜೂನ್ 26 ರಂದು ತೀರ್ಥಹಳ್ಳಿಯಿಂದ ಐವರು ಮೀನು ಹಿಡಿಯಲು ಕಾರಿನಲ್ಲಿ ಹೋಗಿದ್ದರು. ವಾಪಾಸ್ ಬರುವಾಗ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು ಇಬ್ಬರು ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಪಘಾತ ಆದ ದಿನವೇ ಅತಿಶಯ (23) ಎಂಬ ಯುವಕ ಮೃತಪಟ್ಟಿದ್ದ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿತ್ತು.
ಸಚಿನ್ (21 ) ಎಂಬ ಯುವಕನ ಬೆನ್ನು ಮೂಳೆ ಮುರಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನನ್ನು ಉಳಿಸಲು ಆತನ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹ ಮಾಡಿ ಚಿಕಿತ್ಸೆ ಕೊಡಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿ ಆಗದೇ ಮಂಗಳವಾರ ಕೊನೆ ಉಸಿರು ಎಳೆದಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓವರ್ ಸ್ಪೀಡ್ ನಲ್ಲಿ ಚಲಿಸುತ್ತಿದ್ದ ಕಾರ್ ಪಲ್ಟಿ..!
ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಸಮೀಪದ ಅರೆಕಲ್ಲು ಎಂಬಲ್ಲಿ ಬುಧವಾರ ಬೆಳಿಗ್ಗೆ ತೀರ್ಥಹಳ್ಳಿಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರೊಂದು ಓವರ್ ಸ್ಪೀಡ್ ನಲ್ಲಿ ಚಲಿಸುತ್ತಿದ್ದ ಕಾರಣ ಪಲ್ಟಿಯಾಗಿದೆ. ಕಾರಿನಲ್ಲಿ ಇದ್ದವರಿಗೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.
ಕಾರು ಅರೆಕಲ್ಲು ಸಮೀಪ ಅಳವಡಿಸಿದ್ದ ಬ್ಯಾರಿಕೇಡ್ ಬಳಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಾರು ಉರುಳಿದ ರಭಸಕ್ಕೆ ಎರಡು ಮೂರು ಪಲ್ಟಿಯಾಗಿ ರಸ್ತೆಯ ಮದ್ಯೆ ಬಿದ್ದಿದೆ.
ವಿದ್ಯುತ್ ಶಾಕ್: ಜಾನುವಾರುಗಳು ಸಾವು
ತೀರ್ಥಹಳ್ಳಿ :–ಕೊಂಡ್ಲೂರು– ನಗರ ರಸ್ತೆಯ ಕೆಳಕೊಪ್ಪ ಗ್ರಾಮದ ರಸ್ತೆಯಲ್ಲಿ ವಿದ್ಯುತ್ ಕಂಬದ ಕೆಳಗಡೆ ಎರಡು ಜಾನುವಾರುಗಳು ಬಿದ್ದು ಸತ್ತುಹೋಗಿದ್ದು ಕಂಬಕ್ಕೆ ವಿದ್ಯುತ್ ತಂತಿಯು ತುಂಡಾಗಿ ಬಿದ್ದು ಗ್ರೌಂಡ್ ಆಗಿ ಜಾನುವಾರುಗಳು ಸಾವು ಕಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆ ಸ್ಥಳದಲ್ಲಿ ಶಾಲಾ ಮಕ್ಕಳು, ವಯಸ್ಸಾದವರು ,ಜನರು ತಿರುಗಾಡುತ್ತಿದ್ದು ವಾಹನಗಳು ಸಂಚರಿಸುತ್ತಿದ್ದು ,ಅನಾಹುತ ಆಗುವ ಸಾಧ್ಯತೆಯಿದ್ದು ತಕ್ಷಣ ವಿದ್ಯುತ್ ಇಲಾಖೆಯವರು ಗಮನ ಹರಿಸಬೇಕಾಗಿ ಗ್ರಾಮಸ್ಥರ ವಿನಂತಿ ಮಾಡಿದ್ದಾರೆ.
ನಂಟೂರು ಗ್ರಾಮದಲ್ಲಿ ಕುಸಿದಮನೆ: ಓರ್ವ ಪಾರು
ಹೊನ್ನೇತಾಳು ಗ್ರಾಮಪಂಚಾಯ್ತಿ ನಂಟೂರು ಗ್ರಾಮದ ಕಳಸಪ್ಪಗೌಡ ಎಂಬುವವರ ವಾಸದ ಮನೆ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಕಳಸಪ್ಪಗೌಡ ಎಂಬುವರ ಮನೆಯ ಜಗುಲಿಯಲ್ಲಿ ಮಲಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಮನೆಯ ನಿಜಮನೆಯ ಭಾಗ ಹಾಗೂ ಹಿಂಬದಿಯ ಭಾಗ ಕುಸಿದಿದ್ದರಿಂದ ಬಾರಿ ಶಬ್ಧಕ್ಕೆ ಎದುರು ಭಾಗದ ಜಗುಲಿಯಲ್ಲಿ ಮಲಗಿದ್ದ ಕಳಸಪ್ಪರವರು ಎಚ್ಚರಗೊಂಡು ನೋಡಿದಾಗ ಮನೆ ಕುಸಿದಿರುವುದು ಕಂಡುಬಂದಿದೆ. ತಕ್ಷಣ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಪಂಚಾಯ್ತಿ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯ ರಾಘವೇಂದ್ರ ಕುಂದಾದ್ರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿನಯ್ , ಗ್ರಾಮ ಸಹಾಯಕ ನಾಗರಾಜ್ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.