ಗಣೇಶ್ ಕೆ ಎನ್ ಅವರಿಂದ ಹೊಸ ಶಾಸನ ಪತ್ತೆ!
– ರಾಜಮನೆತನಕ್ಕೆ ಸಂಬಂಧಿಸಿದ ವೀರಗಲ್ಲು ಶಾಸನ
– ಹೊಂಬುಜದ ‘ಹೆಮ್ಮಾಡಿ ಸಾನ್ತರ’ನ ಹೊಸ ಶಾಸನ
– ಶಾಸನದ ಕುರಿತು ಮಾಹಿತಿ ಹೇಗಿದೆ?
NAMMUR EXPRESS NEWS
ತೀರ್ಥಹಳ್ಳಿ: ಗಣೇಶ್ ಕೆ ಎನ್ ಅವರು ಕಳೆದ ವಾರ ಕ್ಷೇತ್ರಕಾರ್ಯಕ್ಕೆ ಹೋದಾಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ರಾಮನಸರ ಎಂಬ ಗ್ರಾಮದ ಕಾಡಿನಲ್ಲಿ ಹೊಂಬುಜದ ಸಾನ್ತರ ರಾಜಮನೆತನಕ್ಕೆ ಸಂಬಂಧಿಸಿದ ಒಂದು ವೀರಗಲ್ಲುಶಾಸನ ಹೊಸದಾಗಿ ದೊರೆತಿದೆ. ಇದು ಸರಿ ಸುಮಾರು ಸಾವಿರ ವರ್ಷ ಹಳೆಯ ಶಾಸನ ವಾಗಿದ್ದು, ಯುದ್ದದಲ್ಲಿ ಮಡಿದ ವೀರನೊಬ್ಬನ ಕುಟುಂಬಕ್ಕೆ ರಾಜ ಬೊಕ್ಕಸ ದಿಂದ ಒಂದು ಪ್ರಮಾಣದ ತೆರಿಗೆಯನ್ನು ನಿರಂತರವಾಗಿ ಕೊಡತಕ್ಕದ್ದು ಎಂದು ತಿಳಿಸುತ್ತದೆ.ಸಧ್ಯ ಈ ಶಾಸನವು ಇದುವರೆಗೂ ವರದಿ ಹಾಗೂ ಪ್ರಕಟವಾಗಿಲ್ಲದ ಕಾರಣವಾಗಿ ಇದೊಂದು ಹೊಸ ಶಾಸನವಾಗಿದೆ. ಪ್ರಸ್ತುತ ವೀರಗಲ್ಲು 2 ಅಡಿ ಅಗಲ 4 ಅಡಿ ಉದ್ದ ಇದ್ದು, ಪೂರ್ವಾಭಿಮುಖವಾಗಿ ನೆಡಲಾಗಿದೆ. ವೀರಗಲ್ಲು ಕರಿಕಲ್ಲಿನಲ್ಲಿ ಕೆತ್ತನೆಯಾಗಿ 13ನೇ ಸಾಲಿನ ಶಾಸನವನ್ನು ಹೊಂದಿದೆ. ಶಾಸನವು ಶಕವರ್ಷ 1054 ವಿರೋಧಿಕೃತ ಸಂವತ್ಸರದಲ್ಲಿ ರಚನೆಯಾಗಿದ್ದು, ಈ ದಿನಾಂಕವು ಸಾಮಾನ್ಯ ಶಕೆ 1132 ಮಾರ್ಚ್ ಗೆ ಸರಿ ಹೊಂದುತ್ತದೆ.
ಶಾಸನ ಸಾರ :
ಶಾಸನವು ಹೊಂಬುಜದ ಸಾನ್ತರ ಮನೆತನದ ಹೆಮ್ಮಾಡಿ ಸಾನ್ತರನ ಆಡಳಿತವನ್ನು ಉಲ್ಲೇಖಿಸುತ್ತಿದ್ದು, ಅವನ ಪ್ರಶಸ್ತಿಗಳನ್ನು ಗುಣಗಾನಿಸಿದೆ. “ಉತ್ತರ ಮಧುರೆ ಎಂಬ ಪಟ್ಟಿಪೊಂಬುರ್ಚ್ಚವನ್ನು ಹೆಮ್ಮಾಡಿ ಸಾನ್ತರನು ಪಂಚಮಹಾವಾಧ್ಯಗಳಿಂದ ಸಮ್ಮಾನಿತನಾಗಿ ಮಹಾಂಡಳೇಶ್ವರ ವೃತ್ತಿಯಿಂದ ಆಳುತ್ತಿದ್ದ. ಹೊಂಬುಜದ ಪದ್ಮಾವತಿದೇವಿಯ ವರಪ್ರಸಾದದಿಂದ ಜನಿಸಿದ ಹೆಮ್ಮಾಡಿ ಸಾನ್ತರನು ಬಹುಪರಾಕ್ರಮಿಯಾಗಿದ್ದ ಎಂದು ಶಾಸನದಲ್ಲಿ ಕೊಂಡಾಡಲಾಗಿದೆ. ಶತ್ರುಗಳಿಗೆ ಸಿಂಹಸ್ವಪ್ನನೂ, ಸಾಂತರ ಕುಲಕ್ಕೆ ಮೇರು ಪರ್ವತನೂ, ಬಿರುದಭೇರುಂಡ, ಚಂಡಾಟದಲ್ಲಿ ಆಚಾರ್ಯನೂ (ಪೋಲೋ), ಪರ್ವತದಂತಹ ಧೈರ್ಯವಂತನೂ, ಕೀರ್ತಿಗೆ ನಾರಾಯಣನೂ, ಶೌರ್ಯಕ್ಕೆ ಪಾರಾಯಣನೂ, ಜಿನರ ಪಾದಗಳನ್ನು ಪೂಜಿಸುವವನೂ, ಶತ್ರುಸೈನ್ಯವನ್ನು ಗೆದ್ದವನೂ, ಸಾನ್ತರ ಕುಲಕ್ಕೆ ಸೂರ್ಯನೂ, ಬಹುಜನರಿಂದ ಹೊಗಳಿಸಿಕೊಂಡವನೂ, ರಾಜನೀತಿಶಾಸ್ತ್ರದಲ್ಲಿ ಪರಿಣಿತನೂ ಎಂಬ ಬಿರುದಗಳು ಹೆಮ್ಮಾಡಿ ಸಾನರನಿಗೆ ಇದ್ದುದಾಗಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ನಾನಾ ಬಿರುದುಗಳನ್ನು ಅಲಂಕರಿಸಿದ ಹೆಮ್ಮಾಡಿ ಸಾನ್ತರನ್ನು ಸುಖದಿಂದ ರಾಜ್ಯಭಾರ ಮಾಡುತ್ತಿರುವಾಗ ಶಕವರ್ಷ 1054 ರಲ್ಲಿ ಸಾಲಿಯೂರು ಎಂಬಲ್ಲಿ ಶತ್ರುಗಳ ವಿರುದ್ಧ ಯುದ್ಧ ಮಾಡುತ್ತಾನೆ. ಈ ಸಾಲಿಯೂರಿನ (ಸಾಲೂರು)ಕಾಳಗದಲ್ಲಿ ಹೆಮ್ಮಾಡಿ ಸಾಂತರನ ನೆಚ್ಚಿನ ಸೇನಾನಿಯಾದ ಸಿರಿಯಣ್ಣ ಎಂಬುವನು ವೀರಮರಣವನ್ನು ಅಪ್ಪುತ್ತಾನೆ. ಈ ವೀರನಿಗೆ ಮರಣೋತ್ತರವಾಗಿ ಅವನ ಕುಟುಂಬಕ್ಕೆ ಒಂದು ಅಳತೆಯ ಒಂದು ಪ್ರಮಾಣ ಕಾವಲಿನ ಸುಂಕವನ್ನು ದಾನ ಬಿಡುಲಾಗುತ್ತದೆ. ಶಾಸನದಲ್ಲಿ ಕೊನೆಯಲ್ಲಿ ದಾನವನ್ನು ಅಪಹರಣ ಮಾಡಿದವರು ತಾಯಿಯ ಹತ್ತು ಹಾಗೂ ತಂದೆಯ ಹನ್ನೊಂದು ಜನ್ಮವನ್ನು ನರಕ ಕಾಣುವಂತೆ ಮಾಡಿದ ಪಾಪ ಬರುತ್ತದೆ. ಅಲ್ಲದೇ ಸಾವಿರ ಆಕಳುಗಳನ್ನು ಮತ್ತು ಸಾವಿರ ಬ್ರಾಹ್ಮಣರನ್ನೂ ಗಂಗೆಯಲ್ಲಿ ಕೊಂದ ಪಾತಕ ಬರುತ್ತದೆ ಎಂಬ ಶಾಪವಿದೆ.
ಶಾಸನ ಶಿಲ್ಪ!
ನವಶೋಧಿತ ವೀರಗಲ್ಲಿನಲ್ಲಿ ನಾಲ್ಕು ಹಂತದ ಶಿಲ್ಪಪಟ್ಟಿಕೆಗಳಿದ್ದು ಕೆಳಗೆ ಕರುವಿಗೆ ಹಾಲು ಕುಡಿಸುತ್ತಿರುವ ಆಕಳನ್ನು ಚಿತ್ರಿಸಲಾಗಿದೆ. ಇದರ ಅರ್ಥ ಹಸುವಿನ ಸಂತತಿಯ ಹಾಗೆ ಕೊಟ್ಟದಾನ ನಿರಂತರವಾಗಿ ಉಪಭೂಗವಾಗಲಿ ಎಂಬುದಾಗಿದೆ. ಎರಡನೆಯ ಹಂತದಲ್ಲಿ ವೀರ ರಣರಂಗದಲ್ಲಿ ಹೋರಾಡುತ್ತಿರುವುದು ಮತ್ತು ಹೋರಾಡುತ್ತಲೆ ಮಡಿದ ಅವನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯತ್ತಿರುವುದು. ವೀರಮರಣಕ್ಕೆ ಅಪ್ಸರೆಯರಿಂದ ಸನ್ಮಾನ ದೊರೆಯುತ್ತದೆ ಎಂಬ ಭಾವವನ್ನು ಇಲ್ಲಿ ಕಾಣಬಹುದು. ಇನ್ನು ಮೂರನೆಯ ಹಂತ ದೈವ ಸನ್ನಿಧಿಯದ್ದಾಗಿದ್ದು ಮಧ್ಯದಲ್ಲಿ ಶಿವಲಿಂಗ, ಶಿವಲಿಂಗವನ್ನು ಪೂಜಿಸುತ್ತಿರುವ ಯತಿ, ವೀರ ಹಾಗೂ ಸೇವಕನನ್ನು ಚಿತ್ರಿಸಲಾಗಿದೆ. ವೀರಮರಣ ಶ್ರೇಷ್ಠವಾದುದು ಎಂಬುದನ್ನು ವೀರನಿಗೆ ಎತ್ತರವಾದ ಆಸನ ಹಾಕುವುದರ ಮೂಲಕ ಅವನನ್ನು ಕೀರ್ತಿಸಲಾಗಿದೆ. ನಾಲ್ಕನೆಯ ಶಿಲ್ಪಪಟ್ಟಿಕೆ ಶಿಥಿಲವಾಗಿದ್ದು ಹೆಮ್ಮಾಡಿ ಸಾಂತರ ಕುದುರೆ ಮೇಲೆ ಕುಳಿತ ಶಿಲ್ಪವನ್ನು ಕಾಣಬಹುದು. ಮಧ್ಯೆ ಶಿವಲಿಂಗ ಆಕೃತಿಯ ತರಹದ ಒಂದು ಶಿಲ್ಪವನ್ನು ನೋಡಬಹುದಾಗಿದೆ.
ಹೆಮ್ಮಾಡಿ ಸಾನ್ತರ!
ಗಣೇಶ್ ಕೆ ಎನ್ ಅವರ ಅಧ್ಯಯನದ ಮಿತಿಯಲ್ಲಿ ಕಂಡಂತೆ ಪ್ರಸ್ತುತ ಶಾಸನದಲ್ಲಿ ಬರುವ ಹೆಮ್ಮಾಡಿ ಸಾನ್ತರ ಹೊಸದಾಗಿ ಇಲ್ಲಿ ಪರಿಚಿತವಾಗುತ್ತಿದ್ದಾನೆ. ನಾಡೋಜ ಹಂ.ಪ ನಾಗರಾಜಯ್ಯ ಅವರು ಹೊಂಬುಜದ ಸಾನ್ತರರ ರಾಜಮನೆತನದ ಬಗ್ಗೆ ವಿಸ್ತ್ರುತವಾಗಿ ಅಧ್ಯಯನ ಮಾಡಿ ಮೌಲ್ಯಯುತವಾದ ಗ್ರಂಥಗಳನ್ನು ಬರೆದಿದ್ದಾರೆ.
ಸಾನ್ತರ ಬಗೆಗೆ ಬರೆದ ಅವರ ಯಾವ ಗ್ರಂಥದಲ್ಲಿಯೂ ಕ್ರಿ.ಶ 1132 ಬರುವ ಈ ಹೆಮ್ಮಾಡಿ ಸಾನ್ತರನ ಉಲ್ಲೇಖವಿಲ್ಲ. ಹಾಗಾಗಿ ಹೊಂಬುಜದ ಸಾನ್ತರರ ಅಜ್ಞಾತವಾಗಿದ್ದ ಒಬ್ಬ ಅರಸನನ್ನು ರಾಮನಸರದ ವೀರಗಲ್ಲು ಪರಿಚಯಿಸಿದೆ. ಸಾನ್ತರ ಬಹಳಷ್ಟು ಅರಸರುಗಳಿಗೆ ಇರುವ ಪ್ರಶಸ್ತಿಗಳನ್ನು ಹೆಮ್ಮಾಡಿ ಸಾನ್ತರನಿಗೂ ಅನ್ವಯಿಸಲಾಗಿದೆ. ಹೆಮ್ಮಾಡಿ ಸಾನ್ತರ ಕಂದುಕ(ಪೋಲೋ) ಕ್ರೀಡೆಯಲ್ಲಿ ಆಚಾರ್ಯನಾಗಿದ್ದ ಎಂದು ಶಾಸನದಲ್ಲಿ ಹಾಗೂ ಶಿಲ್ಪದಲ್ಲಿ ತೋರಿಸಲಾಗಿದೆ. ವೀರಗಲ್ಲಿನ ತುದಿಯಲ್ಲಿ ಈ ಭಗ್ನಶಿಲ್ಪವನ್ನು ಕಾಣಬಹುದು ಸಧ್ಯದ ವೀರಗಲ್ಲು ಸಾನ್ತರರ ಶಾಸನಗಳಿಗೆ ಒಂದು ಹೊಸ ಸೇರ್ಪಡೆಯಾಗಿದೆ. ವೀರಗಲ್ಲಿನ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುತ್ತಿದೆ.
ಶಾಸನ ಶೋಧನೆಯಲ್ಲಿ ಸಹಾಯ ಮಾಡಿದ ಸುರೇಶ್ ಮಂಗಳ ಗಣೇಶ್ ಮಂಗಳ ಇವರಿಗೆ ಈ ಮೂಲಕ ಧನ್ಯವಾದಗಳನ್ನು ಸಮರ್ಪಿಸಲಾಗಿದೆ.
ಹೆಮ್ಮಾಡಿ ಶಾಂತರಸರ ಉಲ್ಲೇಖವಿರುವ ನೂತನ ಶಾಸನ ತೀರ್ಥಹಳ್ಳಿ ಸಮೀಪ ರಾಮನಸರದಲ್ಲಿ ದೊರೆತ ವಿಷಯ ತಿಳಿದು ಸಂತೋಷವಾಯ್ತು .ಶಾಂತರಸರೂ ಈ ಭಾಗದಲ್ಲಿ ಸಾವಿರ ವರ್ಷ ಆಳಿರುತ್ತಾರೆ .ಅವರ ಬಗ್ಗೆ ಈಗಾಗಲೇ ಸಾಕಷ್ಟು ಶೋಧನೆ ನಡೆದಿದ್ದು, ಈ ಶಾಸನ ಹೊಸ ಸೇರ್ಪಡೆ. ಗಣೇಶ ಕೆ ಎನ್ ಅವರ ಶೋಧನಾ ಕಾರ್ಯ ಹೀಗೆ ಮುಂದುವರಿಯಲಿ. ಶಾಂತರರ ಅಕ್ಷರ ಅಕ್ಷಯವಾಗಲಿ.
– ಪರಮಪೂಜ್ಯ ಜಗದ್ಗುರುಗಳು
ಸ್ವಸ್ತಿ ಶ್ರೀಶ್ರೀಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು
ಜೈನಮಠ ಹೊಂಬುಜ.