ತೀರ್ಥಹಳ್ಳಿಯಲ್ಲಿ ರಾಷ್ಟ್ರಭಕ್ತರ ಬಳಗ ಹೆಸರಿನಲ್ಲಿ ಕೆ.ಎಸ್ ಈಶ್ವರಪ್ಪನವರಿಗೆ ಬೆಂಬಲ.!
– ವಿಜಯೇಂದ್ರ ಅವರದ್ದು ಕಾಂಗ್ರೆಸ್ ಪಕ್ಷದ ಛಾಯಾಚಿತ್ರ: ಮೇಲಿನಕೊಪ್ಪ ರಮೇಶ್
NAMMUR EXPREESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸೋಮವಾರ ಅನ್ನಪೂರ್ಣ ಗ್ರಾಂಡ್ ಸಭಾಂಗಣದಲ್ಲಿ ರಾಷ್ಟ್ರಭಕ್ತರ ಬಳಗ ಎಂಬ ಹೆಸರಿನಲ್ಲಿ ಕೆ.ಎಸ್ ಈಶ್ವರಪ್ಪನವರಿಗೆ ಬೆಂಬಲ ಸೂಚಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೇಲಿನಕೊಪ್ಪ ಮಹೇಶ್, ನಾವು ಮಾಡುತ್ತಿರುವುದು ಪಕ್ಷಾಂತರ ಅಲ್ಲ. ನಾವೇನು ಈಗ ಕುಳಿತಿದ್ದೇವೆ ಅದುವೇ ನಿಜವಾದ ಬಿಜೆಪಿ. ನಿಷ್ಠಾವಂತ ಕಾರ್ಯಕರ್ತರು, ಬಿಜೆಪಿ ಹಾಗೂ ಹಿಂದುತ್ವಕ್ಕೆ ಬದುಕು ನೀಡಿದವರಿಗೆ ಅಸಮಾಧಾನ ಇದೆ. ಅವರೆಲ್ಲರಿಗೂ ನ್ಯಾಯ ದೊರಕಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಈಶ್ವರಪ್ಪನವರಿಗೆ ಆಗಿರುವ ಅನ್ಯಾಯದ ವಿರುದ್ಧವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಮೋದಿ ಹಾಗೂ ಅಮಿತ್ ಶಾ ಕೂಡ ಕುಟುಂಬ ರಾಜಕಾರಣವನ್ನು ವಿರೋಧ ಮಾಡುತ್ತ ಬರುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕುಟುಂಬ ರಾಜ್ಯದಲ್ಲಿ ಎಲ್ಲವನ್ನು ಹಿಡಿತ ಸಾಧಿಸುತ್ತ ಬಂದಿದೆ. ಬೇರೆ ಪಕ್ಷದವರಿಗೆ ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಹೇಳಿದ್ದೇವೆ ಆದರೆ ಇವರು ಮಾಡುತ್ತಿರುವುದು ಸರಿಯಲ್ಲ ಎಂದರು.
ಈಶ್ವರಪ್ಪನವರು ಮಗನಿಗೆ ಟಿಕೆಟ್ ಕೇಳಿದ್ದು ಕುಟುಂಬ ರಾಜಕಾರಣ ಅಲ್ಲ. ಅವರು ಶಿವಮೊಗ್ಗದಲ್ಲಿ ತಮ್ಮ ಮಗನಿಗೆ ತೊಂದರೆ ಆಗಬಾರದು ಎಂದು ಬಿ.ಎಸ್ ಯಡಿಯೂರಪ್ಪ ನವರು ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ದಾರೆ. ಹಿಂದುತ್ವದ ನಾಯಕರಾಗಿದ್ದ ಸಿ.ಟಿ ರವಿ, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಸೇರಿ ಹಲವರಿಗೆ ಟಿಕೆಟ್ ನೀಡದೆ ಇರುವುದು ಹಾಗೆ ಶೋಭಾ ಕರಂದ್ಲಾಜೆ ಅವರನ್ನು ಗೋ ಬ್ಯಾಕ್ ಎಂದರೂ ಬೆಂಗಳೂರು ಉತ್ತರಕ್ಕೆ ಟಿಕೆಟ್ ನೀಡಿದ್ದು, ಈ ಎಲ್ಲವನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಈಶ್ವರಪ್ಪನವರು ಸ್ಪರ್ಧೆ ಮಾಡುತ್ತಿದ್ದಾರೆ. ಈಶ್ವರಪ್ಪನವರ ರಾಷ್ಟ್ರ ಭಕ್ತ ನಿಜವಾದ ಬಿಜೆಪಿ, ವಿಜಯೇಂದ್ರ ಅವರದ್ದು ಕಾಂಗ್ರೆಸ್ ಪಕ್ಷದ ಛಾಯಾಚಿತ್ರ ಹಾಗಾಗಿ ಈಶ್ವರಪ್ಪನವರ ಕೈ ಬಲಪಡಿಸಬೇಕು ಎಂದು ತೀರ್ಮಾನಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮದನ್ ಗೊರ್ಕೋಡು, ಸಚಿನ್ ಗೌಡ ಗರ್ತಿಕೆರೆ, ರಾಘವೇಂದ್ರ, ಅವಿನಾಶ್, ಶಶಿ ಕುಂದರ್, ಹಾಗೂ ಪ್ರದೀಪ್ ಮತ್ತು ಪ್ರಮುಖರು ಇದ್ದರು.