- ಕೌಶಲ್ಯಾಧಾರಿತ ಉನ್ನತ ಹುದ್ದೆಗಳಿಗೆ ವೀಸಾ ನಕಾರ
- ಟೆಕ್ಕಿ, ರಿಸರ್ಚರ್, ಡಾಕ್ಟರ್ ಹುದ್ದೆಗಳು ಇನ್ನು ಡೌಟು?
ವಾಷಿಂಗ್ಟನ್: ಕರೋನಾ ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ನಷ್ಟದ ಹಿನ್ನೆಲೆ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರಕಾರ ತನ್ನ ವೀಸಾ ನೀತಿಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಉನ್ನತ ಮಟ್ಟದ ಕೌಶಲ್ಯದ ಅಗತ್ಯ ಇರುವ ಹುದ್ದೆಗಳಿಗೆ ಎಚ್-1ಬಿ ವೀಸಾವನ್ನು ನಿರಾಕರಿಸಲು ಪ್ರಸ್ತಾಪಿಸಿದೆ.
ಮುಖ್ಯವಾಗಿ ತಂತ್ರಜ್ಞಾನ ಆಧಾರಿತ ಕಂಪನಿಗಳಿಗೆ ಇದರಿಂದ ಸಮಸ್ಯೆಯಾಗಬಹುದು. ಸಾವಿರಾರು ಮಂದಿ ಭಾರತೀಯರ ಮೇಲೆ ಪ್ರತಿಕೂಲ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕನ್ನರಿಗೆ ಉದ್ಯೋಗಗಳನ್ನು ಉಳಿಸಿಕೊಡುವ ನಿಟ್ಟಿನಲ್ಲಿ ವೀಸಾ ನೀತಿಯನ್ನು ಬಿಗಿಗೊಳಿಸಲಾಗುತ್ತಿದೆ ಎಂದು ಟ್ರಂಪ್ ಸರಕಾರ ತಿಳಿಸಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಎರಡು ವಾರ ಬಾಕಿ ಇರುವಂತೆ ಈ ಘೋಷಣೆ ಹೊರಬಿದ್ದಿದೆ.
ಅಮೆರಿಕದಲ್ಲಿ ಎಚ್-1ಬಿ ಸ್ಪೆಷಾಲಿಟಿ ಒಕ್ಯುಪೇಶನ್ಸ್ ಪದ್ಧತಿಯಡಿಯಲ್ಲಿ ವಿದೇಶಿಯರು ತಾತ್ಕಾಲಿಕ ಅವಧಿಗೆ ಅಮರಿಕದಲ್ಲಿ ಸೇವೆ ಸಲ್ಲಿಸಬಹುದು. ಭಾರತೀಯ ಕಂಪನಿಗಳು ಬಿ-1 ವೀಸಾ ಅಡಿಯಲ್ಲಿ ಅಮೆರಿಕಕ್ಕೆ ತಾತ್ಕಾಲಿಕವಾಗಿ ತಮ್ಮ ಉದ್ಯೋಗಿಗಳನ್ನು ಕಳಿಸಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದವು.
ಈ ಬದಲಾವಣೆಯಿಂದ ಎಚ್-1 ಬಿ ವೀಸಾ ಪ್ರಕ್ರಿಯೆ ಪಾರದರ್ಶಕವಾಗಿರಲಿದೆ. ‘ಎಚ್’ನೀತಿಯ ಬದಲಿಗೆ ‘ಬಿ-1’ ನೀತಿಯ ಮೂಲಕ ವಿದೇಶಿ ಉದ್ಯೋಗಗಳು ಅಮೆರಿಕವನ್ನು ಪ್ರವೇಶಿಸುವ, ನೀತಿ ದುರ್ಬಳಕೆಯಾಗುವ ಅವಕಾಶವನ್ನು ತಡೆಯಲಾಗುವುದು ಎಂದು ಸರಕಾರ ಪ್ರತಿಪಾದಿಸಿದೆ.
ಟ್ರಂಪ್ ಸರಕಾರ ಎಚ್-1ಬಿ ವಿ?ಸಾ ನಿಯಮಗಳನ್ನು ಬಿಗಿಗೊಳಿಸುವುದರಿಂದ ಅಮೆರಿಕದ ಆಸ್ಪತ್ರೆಗಳು, ವಿದೇಶಿ ಮೂಲದ ತಜ್ಞ ವೈದ್ಯರಿಗೆ ಕನಿಷ್ಠ 40 ಪಸೆರ್ಂಟ್ ಹೆಚ್ಚುವರಿ ವೇತನ ನೀಡಬೇಕಾಗಿದೆ. ಪ್ರತಿ ವರ್ಷ ಬಿಡುಗಡೆಯಾಗುವ 85,000 ಎಚ್-1ಬಿ ವೀಸಾದಲ್ಲಿ ಮೂರನೇ ಎರಡರಷ್ಟು ಭಾರತೀಯರಿಗೆ ಹೋಗುತ್ತದೆ. ಭಾರತದ ಅನೇಕ ವೈದ್ಯರು ಅಮೆರಿಕದ ವೈದ್ಯಕೀಯ ವಲಯದಲ್ಲಿದ್ದಾರೆ. ಐಟಿ, ವೈದ್ಯಕೀಯ, ರಿಸರ್ಚ್ ಕೆಲಸದಲ್ಲಿ ಭಾರತೀಯರಿದ್ದು ಇದೀಗ ಭಾರತೀಯರಿಗೆ ಅಮೆರಿಕಾ ಬಾಗಿಲು ಬಂದ್ ಆಗುವ ಸಾಧ್ಯತೆಗಳಿವೆ.