ಏ.30ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರಂಭ
– ಶುರುವಾಯ್ತಾ ಪೂರ್ವ ಮುಂಗಾರು?
– ಹವಮಾನ ಇಲಾಖೆ ಮುನ್ಸೂಚನೆ
NAMMUR EXPRESS NEWS
ಕರ್ನಾಟಕದಲ್ಲಿ ಬಿಸಿಲಿನ ಧಗೆ ಏರುತ್ತಿದ್ದು, ಕೆಲವು ದಿನಗಳ ಹಿಂದೆ ರಾಜ್ಯದ ಹಲವೆಡೆ ಮಳೆಯಾಗಿತ್ತು. ಆಮೇಲೆ ವರುಣ ದೇವ ಕಣ್ಮರೆಯಾಗಿದ್ದಾನೆ. ಮಳೆಯಿಲ್ಲದೇ ತಾಪಮಾನ ಹೆಚ್ಚಾಗುತ್ತಿದ್ದು, ಜನರು ಸಂಕಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಮತ್ತೆ ಏಪ್ರಿಲ್ 30ರಿಂದ ರಾಜ್ಯದ ಹಲವೆಡೆ ಮಳೆ ಸುರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್ 27, 28 ಮತ್ತು 29ರಂದು ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ. ಏಪ್ರಿಲ್ 30 ರಿಂದ ಮೇ 3 ರವರೆಗೆ ರಾಜ್ಯದ ಹಲವೆಡೆ ಮಳೆ ಬರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಏಪ್ರಿಲ್ 30ರಂದು ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಮತ್ತು ಚಿತ್ರದುರ್ಗದ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಮೇ 1ರಂದು ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮೇ 2ರಂದು ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ ಮತ್ತಯ ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ನಿರೀಕ್ಷೆ ಇದೆ. ಇನ್ನು, ಮೇ 3ರಂದು ಕೊಡಗು, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಾಗೂ ಮಂಡ್ಯ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
– ಹಲವು ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ!
ಮಳೆ ಜೊತೆ ರಾಜ್ಯದಲ್ಲಿ ಉಷ್ಣ ಅಲೆಯ ಎಚ್ಚರಿಕೆಯನ್ನು ಕೂಡ ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್ 30 ರವರೆಗೂ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೀದರ್, ವಿಜಯನಗರ, ಗದಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾವೇರಿ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಅದಲ್ಲದೇ ಮುಂದಿನ ಐದು ದಿನಗಳಲ್ಲಿ ರಾಜ್ಯದ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ನಿರೀಕ್ಷೆ ಇದೆ.