ಹಾಡಹಗಲೇ ಯುವತಿ ಕತ್ತು ಸೀಳಿದ ಯುವಕ!
– ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಟ್ಟಣದಲ್ಲಿ ಘಟನೆ
– ಉಡುಪಿಯಲ್ಲಿ 8 ಲಕ್ಷ ಮೌಲ್ಯದ ವಸ್ತು ಜತೆ ಕಳ್ಳ ಅರೆಸ್ಟ್!: ಕದ್ದ ಚಿನ್ನ ಅಡ ಇಟ್ಟು ಮೋಜು ಮಸ್ತಿ!
– ಬೆಳ್ತಂಗಡಿ: ಕಡವೆ ಬೇಟೆ: ಮೂವರ ಬಂಧನ
– ಮಂಗಳೂರಲ್ಲಿ ಮರಳು ಮಾಫಿಯಾಕ್ಕೆ ಬ್ರೇಕ್?
NAMMUR EXPRESS NEWS
ಪುತ್ತೂರು: ಮಹಿಳಾ ಪೊಲೀಸ್ ಸ್ಟೇಷನ್ ಬಳಿಯೇ ಯುವತಿಗೆ ಯುವಕನೊಬ್ಬ ಚೂರಿಯಿಂದ ಚುಚ್ಚಿದ ಘಟನೆ ಆ.24ರಂದು ಮಧ್ಯಾಹ್ನ ನಡೆದಿದೆ. ಗಾಯಾಳು ಮಹಿಳೆಯನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಿಂದ ಬಂದ ವ್ಯಕ್ತಿಯಿಂದ ಈ ಕೃತ್ಯ ಎಸೆಯಲಾಗಿದೆ. ಇರಿತಕ್ಕೊಳಗಾದ ಯುವತಿಯನ್ನು ವಿಟ್ಲ ಮೂಲದ ಗೌರಿ(20.ವ) ಎಂದು ಗುರುತಿಸಲಾಗಿದೆ. ಚೂರಿಯಿಂದ ಗೌರಿಯ ಹತ್ಯೆಗೆ ಯತ್ನಿಸಿದ ಯುವಕ ಕುತ್ತಿಗೆಗೆ ಚೂರಿ ಇರಿದು ಬಳಿಕ ತಾನು ಬಂದಿದ್ದ ಬೈಕ್ ನಲ್ಲಿ ಪರಾರಿಯಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ ಪದ್ಮರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗುತ್ತಿದೆ.
ಉಡುಪಿಯಲ್ಲಿ 8 ಲಕ್ಷ ಮೌಲ್ಯದ ವಸ್ತು ಜತೆ ಕಳ್ಳ ಅರೆಸ್ಟ್!: ಕದ್ದ ಚಿನ್ನ ಅಡ ಇಟ್ಟು ಮೋಜು ಮಸ್ತಿ
ಉಡುಪಿಯ ಉದ್ಯಾವರ ಬೊಳ್ಳೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಿಸಿದ್ದು ಚಿನ್ನಾಭರಣ, ನಗದು, ಸ್ಕೂಟಿ ಸಹಿತ 8,02,083 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32)ಬಂಧಿತ ಆರೋಪಿ. ಬಂಧಿತನಿಂದ 6,90,713 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಸಹಿತ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ ನೀಡಿದ ಮಾಹಿತಿಯ ಮೇರೆಗೆ ವಿವಿಧ ಸಹಕಾರಿ ಸಂಘಗಳು, ಫೈನಾನ್ಸ್ಗಳು, ಚಿನ್ನಾಭರಣ ಅಂಗಡಿಗಳಿಗೆ ತೆರಳಿದ ಪೊಲೀಸರು ಚಿನ್ನಾಭರಣಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಮದ್ಯ ವ್ಯಸನ, ಸಾಲ ಮತ್ತು ಜೂಜಾಟದ ಸುಳಿಗೆ ಸಿಲುಕಿದ್ದ ಆರೋಪಿ ಚಿನ್ನಾಭರಣಗಳನ್ನು ಮಾರಾಟ ಮಾಡಿದ ಮತ್ತು ಒತ್ತೆಯಿಟ್ಟ ಹಣವನ್ನು ಇಸ್ಪೀಟ್, ಜೂಜಾಟ ಮತ್ತು ಮದ್ಯ ವ್ಯಸನಕ್ಕೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ: ಕಡವೆ ಬೇಟೆ: ಮೂವರು ಅರೆಸ್ಟ್!
ಬೆಳ್ತಂಗಡಿ ತಾಲೂಕು ಪಟ್ರಿಮ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿ ಕಪಿಲಾ ನದಿ ತೀರದಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ಕಡವೆ ಬೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಡಿಆರ್ ಎಫ್ಒ ಸಿ.ಎನ್. ಲೋಕೇಶ್ ಅಶೋಕ್ ,ರಾವುತಪ್ಪ, ಅರಣ್ಯ ಪಾಲಕರಾದ ವಿನಯ ಚಂದ್ರ ಹಾಗೂ ಕಿಶೋರ್ ಗಸ್ತು ನಿರತರಾಗಿದ್ದು, ಖಚಿತ ವರ್ತಮಾನದ ಮೇರೆಗೆ ಕಾದು ಕುಳಿತಿದ್ದರು. ಇದೇ ವೇಳೆ ಬೇಟೆಯಾಡಿದ ಶಬ್ದ ಕೇಳಿದ ಬೆನ್ನಲ್ಲೇ ಕಾಡಿನಲ್ಲಿ ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದರು. ನಾಲ್ಕು ವರ್ಷದ ಹೆಣ್ಣು ಕಡವೆಯನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿ ಸಹಿತ ಆರೋಪಿಗಳಾದ ಸುದೇಶ್ ಪಟ್ರಮೆ, ಪುನೀತ್, ಕೋಟ್ಯಪ್ಪ ಗೌಡ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಆರೋಪಿ ಲೋಕೇಶ್ ತಲೆಮರೆಸಿಕೊಂಡಿದ್ದಾನೆ.
ಮಂಗಳೂರಲ್ಲಿ ಮರಳು ಮಾಫಿಯಾಕ್ಕೆ ಬ್ರೇಕ್?
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕಲ್ಲಾಪು ಮತ್ತು ಉಳ್ಳಾಲದ ಕೋಟೆ ಪುರದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಮರಳು ಅಡ್ಡೆಗೆ ಉಳ್ಳಾಲ ಠಾಣಾ ಪೊಲೀಸರು ಗುರುವಾರ ಬೆಳಗ್ಗಿನ ಜಾವಾ ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ KL 29- 482 ಪಿಕಪ್ ವಾಹನ ಮತ್ತು 12 ಲೋಡಿನಷ್ಟು ಸಾಮಾನ್ಯ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಮರಳು ಮತ್ತು ವಾಹನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ