ಸೌಜನ್ಯ ಕೇಸಿಗೆ ಬಿಗ್ ಟ್ವಿಸ್ಟ್!
– ಧರ್ಮಸ್ಥಳದಲ್ಲಿ ಈಗ ಸೌಜನ್ಯ ಕೇಸ್ ಆಣೆ ಪ್ರಮಾಣ!
– ಅಣ್ಣಪ್ಪಸ್ವಾಮಿ ಬೆಟ್ಟದಲ್ಲಿ ಸೌಜನ್ಯ ತಾಯಿಯಿಂದ ಪ್ರಾರ್ಥನೆ
– ಆರೋಪ ಮಾಡುತ್ತಿರುವ ಮೂವರಿಂದಲೂ ಆಣೆ ಪ್ರಮಾಣ
NAMMUR EXPRESS NEWS
ಧರ್ಮಸ್ಥಳ: ಸೌಜನ್ಯ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಭಾನುವಾರ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಆಣೆ ಪ್ರಮಾಣ ನಡೆದಿದೆ.ಅಣ್ಣಪ್ಪಸ್ವಾಮಿ ಬೆಟ್ಟದಲ್ಲಿ ಸೌಜನ್ಯ ತಾಯಿಯಿಂದ ಪ್ರಾರ್ಥನೆ ಮಾಡಿದರೆ ಕೊಲೆ ಆರೋಪ ಮಾಡುತ್ತಿರುವ ಮೂವರಿಂದಲೂ ಆಣೆ ಪ್ರಮಾಣ ನಡೆದಿದೆ. ಸೌಜನ್ಯಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರ ನೇತೃತ್ವದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಬೆಟ್ಟದ ಮುಂಭಾಗದಲ್ಲಿ ಮಗಳ ಸಾವಿಗೆ ಕಣ್ಣೀರಿಟ್ಟು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಸೌಜನ್ಯ ತಾಯಿ ಆರೋಪ ಮಾಡಿರುವ ಉದಯ್ ಜೈನ್, ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲಗುಡಿ ಕೂಡ ಅಣ್ಣಪ್ಪ ಗುಡಿಯ ಮುಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಭಾನುವಾರ ವಿಶ್ವ ಹಿಂದೂ ಪರಿಷತ್, ಭಜರಂಗಳದ ವತಿಯಿಂದ ನೇತ್ರಾವತಿ ನದಿಯಿಂದ ಧರ್ಮಸ್ಥಳದ ಅಣ್ಣಪ್ಪಸ್ವಾಮಿ ಬೆಟ್ಟದ ವರೆಗೂ ಪಾದಯಾತ್ರೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಭಜರಂಗಳದ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಜೊತೆಗೆ ಸೌಜನ್ಯ ತಾಯಿ ಕುಸುಮಾವತಿ ಅವರು ಕೂಡ ಪಾದಯಾತ್ರೆ ನಡೆಸಿ ಅಣ್ಣಪ್ಪಸ್ವಾಮಿ ಬೆಟ್ಟಕ್ಕೆ ತೆರಳಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಅವರು ಸಂಘಟನೆಯ ಪರವಾಗಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಕಳೆದ 11 ವರ್ಷಗಳಿಂದಲೂ ಸೌಜನ್ಯ ಕುಟುಂಬಸ್ಥರು ಹೋರಾಟ ನಡೆಸುತ್ತಿದ್ದಾರೆ. ನೈಜ ಆರೋಪಿಗಳು ಯಾರು ಅನ್ನೋದನ್ನು ತಿಳಿಸುವುದರ ಜೊತೆಗೆ ಆರೋಪಿಗಳಿಗೆ ದೇವರೇ ಶಿಕ್ಷೆಯನ್ನು ನೀಡಬೇಕೆಂದು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಅಣ್ಣಪ್ಪಸ್ವಾಮಿ ಗುಡಿಯ ಮುಂದೆ ನಿಂತ ಸೌಜನ್ಯ ತಾಯಿ ಕುಸುಮಾವತಿ ಕೂಡ ಕಣ್ಣೀರು ಹಾಕಿ ಪ್ರಾರ್ಥನೆ ಮಾಡಿದ್ದಾರೆ.
ನಮ್ಮ ಹೆಸರಿಗೆ ಚ್ಯುತಿ ತಂದವರಿಗೆ ಶಿಕ್ಷೆಯಾಗಲಿ…
ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ಮಲ್ಲಿಕ್ ಜೈನ್, ಉದಯ್ ಜೈನ್ ಹಾಗೂ ಧೀರಜ್ ಕಲ್ಲಗುಡಿ ಕೂಡ ದೇವರ ಮುಂದೆಯೇ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಧರ್ಮಸ್ಥಳದಲ್ಲಿ ದುರ್ಮರಣ ಸಂಭವಿಸಿದ್ದು, ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ನಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ. ನಮ್ಮ ಹೆಸರನ್ನು ಎಳೆದು ತರುವವರಿಗೆ ಶಿಕ್ಷೆಯಾಗಲಿ ಎಂದು ಪ್ರಾರ್ಥಿಸಿ, ಕಾಣಿಸಿ ಸಲ್ಲಿಸಿದ್ದಾರೆ. ಅಣ್ಣಪ್ಪ ಸ್ವಾಮಿಯ ಗುಡಿಯ ಮುಂಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ಅಹಿತಕರ ಘಟನೆಗಳು ನಡೆಯದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಿಶ್ಯಂತ್ ಅವರು ಖುದ್ದು ಭೇಟಿ ನೀಡಿ ವಿಶೇಷ ಪೊಲೀಸ್ ಭದ್ರತೆಯನ್ನು ಒದಗಿಸಿದ್ದಾರೆ.