ಬ್ಯಾಂಕಿಗೆ ಬಂದ ಮಹಿಳೆ ಮೈಮೇಲೆ ಬಂತು ದೇವರು!
– ಶಿವಮೊಗ್ಗದ ಆಯನೂರು ಬ್ಯಾಂಕಿನಲ್ಲಿ ಘಟನೆ
– ಕೂದಲು ಬಿಚ್ಚಿ, ಕೂಗುತ್ತಾ ಕುಳಿತ ಮಹಿಳೆ
– 20 ಸಾವಿರ ರೂ. ಹಣಕ್ಕೆ ಪಟ್ಟು: ಏನಿದು ಘಟನೆ?
NAMMUR EXPRESS NEWS
ಆಯನೂರು( ಶಿವಮೊಗ್ಗ): ಶಿವಮೊಗ್ಗದ ಆಯನೂರು ಬ್ಯಾಂಕಿಗೆ ಬಂದ ಮಹಿಳೆಯೊಬ್ಬರು 20 ಸಾವಿರ ರೂ. ಹಣ ನೀಡುವಂತೆ ಪಟ್ಟು ಹಿಡಿದಿದ್ದಲ್ಲದೆ ತನ್ನ ಮೇಲೆ ದೇವರು ಬಂದಿದೆ ಎಂದು ಕೂಗಾಡಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮೈ ಮೇಲೆ ದೇವರು ಬಂದಿದೆ ಎಂದು ತಿಳಿಸಿ ಬ್ಯಾಂಕಿನಲ್ಲಿದ್ದವರಿಗೆ ಕೆಲಕಾಲ ಆತಂಕ ಮೂಡಿಸಿದ್ದ ಮಹಿಳೆ ಆಯನೂರಿನ ಬ್ಯಾಂಕ್ ಒಂದರ ಗ್ರಾಹಕಿ. ಬ್ಯಾಂಕಿಗೆ ಬಂದ ಆಕೆ 20 ಸಾವಿರ ರೂ. ಚೆಕ್ ಕೊಟ್ಟು, ಹಣ ನೀಡುವಂತೆ ತಿಳಿಸಿದ್ದಳು. ಪರಿಶೀಲಿಸಿದಾಗ ಆಕೆಯ ಖಾತೆಯಲ್ಲಿ 2 ಸಾವಿರ ರೂ. ಮಾತ್ರ ಇತ್ತು. ಹಾಗಾಗಿ ಬ್ಯಾಂಕ್ ಸಿಬ್ಬಂದಿ ಹಣ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆ ತನಗೆ 20 ಸಾವಿರ ರೂ. ಹಣ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದಳು. ಕೆಲ ಸಮಯದ ಬಳಿಕ ಕೂದಲು ಕೆದರಿಕೊಂಡು ಮೈ ಮೇಲೆ ದೇವರು ಬಂದಂತೆ ಆಡಲು ಶುರು ಮಾಡಿದಳು. ಇದರಿಂದ ಬ್ಯಾಂಕ್ ಸಿಬ್ಬಂದಿ ಮತ್ತು ಇತರೆ ಗ್ರಾಹಕರು ಆತಂಕಕ್ಕೀಡಾದರು. ಬ್ಯಾಂಕಿನ ಮಧ್ಯದಲ್ಲಿ ಚೇರ್ ಹಾಕಿ ಕುಳಿತುಕೊಂಡ ಮಹಿಳೆ, ‘ನಾನು ದೇವರು, ನನಗೆ ದುಡ್ಡು ಕೊಡಿ. ಈಗ ಹೊಟ್ಟೆ ಹಸಿವಾಗುತ್ತಿದೆ’ ಎಂದು ಮಾತನಾಡಲು ಆರಂಭಿಸಿದರು.
ವಿಚಾರ ತಿಳಿಯುತ್ತಿದ್ದಂತೆ ಕುಂಸಿ ಠಾಣೆ ಪೊಲೀಸರು ಬ್ಯಾಂಕಿಗೆ ದೌಡಾಯಿಸಿದರು. ಮಹಿಳೆಯನ್ನು ಸಮಾಧಾನಿಸಿ ಕಳುಹಿಸಲು ಯತ್ನಿಸಿದರು. ಆದರೆ ತಾನು ದೇವರು ಎಂದು ಆಕೆ ತಿಳಿಸಿ ಬ್ಯಾಂಕಿನಲ್ಲಿ ಮತ್ತಷ್ಟು ಕೂಗಾಟ ಮಾಡಿದಳು. ಆಕೆಯ ಪರಿಸ್ಥಿತಿ ಗಮನಿಸಿದ ಪೊಲೀಸರು 500 ರೂ. ಹಣ ನೀಡಲು ಮುಂದಾದರು. ಆಗ ಆಕೆ, ‘ಇದು 500 ರೂ. ನನಗೆ 20 ಸಾವಿರ ರೂ. ಹಣ ಬೇಕು’ ಎಂದು ಹಠ ಹಿಡಿದಳು ಮಹಿಳೆಯ ತಾಯಿಯನ್ನು ಬ್ಯಾಂಕಿಗೆ ಕರೆಸಿದ ಪೊಲೀಸರು ಆಕೆಯನ್ನು ಸಮಾಧಾನಪಡಿಸಿದರು. ಮಹಿಳೆಯ ಅಸಹಾಯಕತೆ ಕಂಡು ಎಎಸ್ಐ ನಂಜುಂಡಪ್ಪ 500 ರೂ. ನೀಡಿ ಕಳುಹಿಸಿದರು. ಮಹಿಳೆ ಹೊರ ನಡೆಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಪಿಎಸ್ಐ ಶಾಂತರಾಜ್, ಎಎಸ್ಐ ನಂಜುಂಡಪ್ಪ, ಸಿಬ್ಬಂದಿ ಲಕ್ಷ್ಮಿ, ಹೆಡ್ ಕಾನ್ಸ್ಟೇಬಲ್ ಸತೀಶ್ ಸ್ಥಳಕ್ಕೆ ಆಗಮಿಸಿದ್ದರು.