– ಕಾಡಾನೆ ಭೀಮನಿಂದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ!!
– ಚಿಕಿತ್ಸೆ ನೀಡಲು ಹೋದ ವೇಳೆ ದಾಳಿ
– ಘಟನೆಯಲ್ಲಿ ಗಾಯಗೊಂಡ ಅರಣ್ಯ ಸಿಬ್ಬಂದಿ ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟರು
NAMMUR EXPRESS
ಹಾಸನ: ಇತ್ತೀಚೆಗೆ ಕಾಡಾನೆಗಳ ನಡುವಿನ ಕಲಹದ ವೇಳೆ ಗಾಯಗೊಂಡಿದ್ದ ಕಾಡಾನೆ ಭೀಮನಿಗೆ ಚಿಕಿತ್ಸೆ ಕೊಡಲು ಹೋಗಿದ್ದ ಅರಣ್ಯ ಸಿಬ್ಬಂದಿಯ ಮೇಲೆ ಭೀಮ, ದಾಳಿ ನಡೆಸಿರುವ ಘಟನೆ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ವೆಂಕಟೇಶ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ಭೀಮ ಗಾಯಗೊಂಡಾಗಿನಿಂದ ಆನೆಯನ್ನು ಹುಡುಕಾಡಿ ಅದರ ಗಾಯಕ್ಕೆ ಚಿಕಿತ್ಸೆ ನೀಡುವ ಕೆಲಸ ನಿತ್ಯವೂ ಅರಣ್ಯ ಇಲಾಖೆಯ ಸಿಬ್ಬಂದಿಯು ಮಾಡುತ್ತಿದ್ದರು. ದೂರದಿಂದಲೇ ಅದಕ್ಕೆ ಅರವಳಿಕೆ ಗನ್ ನಿಂದ ಅರವಳಿಕೆ ಕೊಟ್ಟು, ಅದು ಪ್ರಜ್ಞೆ ತಪ್ಪಿದ ನಂತರ ಅದರ ಬಳಿಗೆ ಹೋಗಿ ಅದಕ್ಕೆ ಚಿಕಿತ್ಸೆ ನೀಡುವುದು ನಿತ್ಯದ ಕೆಲಸವಾಗಿತ್ತು.
ಅದೇ ರೀತಿ, ಆ. 31ರಂದು ಬೆಳಗ್ಗೆಯಿಂದ ಆನೆಯನ್ನು ಹುಡುಕಾಡುತ್ತಿದ್ದ ಸಿಬ್ಬಂದಿಗೆ, ಆಲೂರು ತಾಲೂಕಿನ ಹಳ್ಳಿಯೂರು ಎಂಬಲ್ಲಿ ನಿಂತಿದ್ದು ಕಣ್ಣಿಗೆ ಬಿತ್ತು. ಅದನ್ನು ಗಮನಿಸಿದ ವೈದ್ಯರು, ದೂರದಿಂದಲೇ ಅದಕ್ಕೆ ಅರವಳಿಕೆ ನೀಡಿದ್ದಾರೆ. ಆದರೆ, ಅರವಳಿಕೆ ಗನ್ ಶಬ್ದ ಕೇಳುತ್ತಲೇ ರೊಚ್ಚಿಗೆದ್ದ ಭೀಮ, ಕೂಡಲೇ ಅರಣ್ಯ ಸಿಬ್ಬಂದಿಯಿದ್ದ ಕಡೆಗೆ ಧಾವಿಸಿಬಂದಿದ್ದಾನೆ. ಈ ಸಂದರ್ಭದಲ್ಲಿ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿಯು ದಿಕ್ಕಾಪಾಲಾಗಿ ಓಡಿದ್ದಾರೆ. ಭೀಮನು ವೆಂಕಟೇಶ್ ಅವರನ್ನೇ ಬೆನ್ನಟ್ಟಿ ಹೋಗಿದ್ದಾನೆ. ಸ್ವಲ್ಪ ದೂರ ಓಡಿದ ಮೇಲೆ ವೆಂಕಟೇಶ್ ಮುಗ್ಗರಿಸಿ ಬಿದ್ದಿದ್ದು, ಅವರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಆನಂತರ, ಸ್ಥಳಕ್ಕೆ ಓಡಿದ ಉಳಿದ ಅರಣ್ಯಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ಹಿಂದೆ, ಇತರ ಕಾಡಾನೆಗಳ ಜೊತೆಗೆ ಕಾದಾಟ ನಡೆಸಿದ್ದ ಭೀಮ, ಬೇರೆ ಕಾಡಾನೆಯೊಂದರ ದಂತದಿಂದ ತಿವಿತಕ್ಕೊಳಗಾಗಿ ಕಾಲಿಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ, ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.