ಟಿಕ್ ಟಾಕ್ ಸ್ಟಾರ್ ನವೀನ್ ಬರ್ಬರ ಹತ್ಯೆ
– ಮೈಸೂರು ಪ್ರವಾಸಕ್ಕೆ ಹೋಗಿದ್ದ ವೇಳೆ ಕಿಡ್ನಾಪ್
– ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳ ಬಂಧನ
– ಕೊಲೆ ರಿವೆಂಜ್ಗಾಗಿ ಈ ಕೊಲೆ ನಡೆಯಿತಾ?
NAMMUR EXPRESS NEWS
ಮೈಸೂರು: ಬೆಂಗಳೂರಿನ ಟಿಕ್ ಟಾಕ್ ಸ್ಟಾರ್ ಒಬ್ಬರನ್ನು ಮೈಸೂರಿನಲ್ಲಿ ಅಪಹರಿಸಿ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 27ರಂದು ಮೈಸೂರಿಗೆ ಆಗಮಿಸಿದ್ದ ಟಿಕ್ ಟಾಕ್ ಸ್ಟಾರ್ ನವೀನ್ನನ್ನು ಅಂದು ಒಂದು ತಂಡ ಕಾರಿನಲ್ಲಿ ಬಂದು ಅಪಹರಿಸಿತ್ತು. ಅಂದು ಕೇವಲ ಮಿಸ್ಸಿಂಗ್ ಕೇಸ್ ಆಗಿ ತಣ್ಣಗೆ ಮಿಸ್ ಆಗಿದ್ದ ಕೇಸ್ ಈಗ ಮರ್ಡರ್ನ ಭಯಾನಕ ತಿರುವು ಪಡೆದಿದೆ. ಇದೀಗ ನವೀನ್ನ ಶವ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಪತ್ತೆಯಾಗಿದೆ.
ರಾತ್ರಿ 9.45ಕ್ಕೆ ಮೈಸೂರಿನಿಂದ ಅಪಹರಣ
ರೀಲ್ಸ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ನವೀನ್ ಕಳೆದ ಆಗಸ್ಟ್ 27ರಂದು ಮೈಸೂರಿಗೆ ಬಂದಿದ್ದರು. ಬೆಂಗಳೂರಿನಿಂದ ಬರುವ ಇಬ್ಬರು ಯುವತಿಯರನ್ನೂ ಜತೆಗೆ ಕರೆದುಕೊಂಡು ಬಂದಿದ್ದ ಅವರು ರಾತ್ರಿ ಮೈಸೂರು ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದರು. ರಾತ್ರಿ 9.45ರ ಹೊತ್ತಿಗೆ ರೀಲ್ಸ್ ಮಾಡುತ್ತಿದ್ದಾಗ ಅಲ್ಲಿಗೆ ಬಂದ ತಂಡವೊಂದು ನವೀನ್ನನ್ನು ಮಾತನಾಡಿಸುತ್ತಾ ಕಾರಿನಲ್ಲಿ ಹಾಕಿ ಪರಾರಿಯಾಗಿತ್ತು. ಆವತ್ತೇ ಮೈಸೂರಿನಲ್ಲಿ ನವೀನ್ ಅಪಹರಣದ ಬಗ್ಗೆ ಸುದ್ದಿ ಹರಡಿತ್ತು. ಆದರೆ, ಯಾರೂ ಇದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನು ಅಪಹರಣ ಎಂದು ಭಾವಿಸದೆ ಮಿಸ್ಸಿಂಗ್ ಕೇಸ್ ಎಂಬಂತೆ ಟ್ರೀಟ್ ಮಾಡಲಾಗಿತ್ತು.
ನಂಜನಗೂಡು ನಾಲೆಯಲ್ಲಿ ಸಿಕ್ಕಿತು ಶವ!:
ಈ ನಡುವೆ ಬಳಿಕ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನು ಹತ್ತಿ ಗಮನಿಸಿದಾಗ ಅದು ಅರಮನೆ ಆವರಣದಿಂದ ನಾಪತ್ತೆಯಾಗಿದ್ದ ನವೀನ್ನ ಶವ ಎಂದು ತಿಳಿದುಬಂದಿತ್ತು.
ಕೊಲೆ ರಿವೆಂಜ್ಗಾಗಿ ಈ ಕೊಲೆ ನಡೆಯಿತಾ?:
ನವೀನ್ ಅಪಹರಣ ಮತ್ತು ಕೊಲೆಯ ಬೆನ್ನು ಬಿದ್ದ ಪೊಲೀಸರಿಗೆ ಕೆಲವು ಬೆಚ್ಚಿ ಬೀಳುವ ಮಾಹಿತಿಗಳು ಲಭ್ಯವಾಗಿವೆ. ಪೊಲೀಸರು ಇದೀಗ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ಕೊಲೆಯ ಸಂಭಾವ್ಯ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಕಾರ್ಪೋರೇಟರ್ ಒಬ್ಬರ ಅಣ್ಣನ ಮಗನ ಕೊಲೆ ರಿವೆಂಜ್ ಗಾಗಿ ನವೀನ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ವಿನೋದ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದ ಈ ನವೀನ್. ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ನವೀನ್ಗಾಗಿ ವಿರೋಧಿಗಳ ತಂಡ ಕಾದು ಕುಳಿತಿತ್ತು. ಮೊದಲು ಟಿಕ್ ಸ್ಟಾರ್ ಆಗಿದ್ದು ಭಾರಿ ಜನಪ್ರಿಯತೆ ಹೊಂದಿದ್ದ ನವೀನ್ ಬಳಿಕ ಟಿಕ್ ಟಾಕ್ ಬಂದ್ ಆದಾಗ ರೀಲ್ಸ್ ಶುರು ಮಾಡಿದ್ದ. ಆದರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಅವನ ಪಾಲಿಗೂ ಮೃತ್ಯುಪಾಶವಾಗಿದೆ. ಸದ್ಯ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಸದ್ಯ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.