ಉಡುಪಿ:ಮೀನುಗಾರಿಕೆ ದೋಣಿಗಳ ಭೌತಿಕ ಪರಿಶೀಲನೆ
– ಉಡುಪಿ :ಮುಖ್ಯ ಶಿಕ್ಷಕಿ ಸೇವೆಯಿಂದ ವಜಾ
– ಪುತ್ತೂರು :ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ
– ಉಡುಪಿ: ಸೆಪ್ಟೆಂಬರ್ನಲ್ಲಿ 8 ದಿನ ಬ್ಯಾಂಕ್ಗೆ ರಜೆ
– ಉಡುಪಿ: ಸೆ. 12 ರಂದು ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
NAMMUR EXPRESS : ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ 2 ತಿಂಗಳ ನಿಷೇಧಿತ ಅವಧಿಯನ್ನು ಹೊರತುಪಡಿಸಿ, ವಾರ್ಷಿಕ 10 ತಿಂಗಳ ಅವಧಿಗೆ ಮಾಸಿಕ ಪ್ರತಿ ದೋಣಿಗೆ 300 ಲೀ. ನಂತೆ ಸೀಮೆಎಣ್ಣೆ ವಿತರಿಸಲು ಸರ್ಕಾರವು ಆದೇಶಿಸಿರುವ ಹಿನ್ನೆಲೆ, ಮೋಟಾರೀಕೃತ ಮೀನುಗಾರಿಕೆ ದೋಣಿಗಳಿಗೆ ಸೀಮೆಎಣ್ಣೆ ಪಡೆಯಲು ಪರ್ಮಿಟ್ಗಾಗಿ ದೋಣಿ ಮಾಲಕರು ಅರ್ಜಿ ಸಲ್ಲಿಸುವ ಮೊದಲು ಇಲಾಖೆಯಿಂದ ದೋಣಿಗಳನ್ನು ಭೌತಿಕ ಪರಿಶೀಲನೆ ಮಾಡಿ ನಂತರ ಪರವಾನಿಗೆ ಹಾಗೂ ಸೀಮೆಎಣ್ಣೆ ರಹದಾರಿಯನ್ನು ದೋಣಿ ಮಾಲಕರಿಗೆ ನೀಡಲಾಗುವುದು.
ಆ ಪ್ರಯುಕ್ತ ಸೆಪ್ಟೆಂಬರ್ 4 ರಂದು ಬೈಂದೂರು ತಾಲೂಕಿನ ಅಳ್ವೆಗದ್ದೆಯ ಮೀನುಗಾರಿಕೆ ಜೆಟ್ಟಿ, ಕಳಿಹಿತ್ಯುವಿನ ಮೀನುಗಾರಿಕೆ ಹರಾಜು ಪ್ರಾಂಗಣ, ಮಡಿಕಲ್ನ ಮಹೇಶ್ವರ ದೇವಸ್ಥಾನ, ಪಡುವರಿ/ತಾರಾಪತಿಯ ಶ್ರೀ ರಾಮ ಮಂದಿರ, ಕೊಡೇರಿ/ಕಿರಿಮಂಜೇಶ್ವರದ ಕೊಡೇರಿ ಬಂದರು, ಮರವಂತೆ ಬಂದರು, ಕಂಚುಕೋಡು ಮಡಿ, ಗಂಗೊಳ್ಳಿ ಲೈಟ್ಹೌಸ್, ಗಂಗೊಳ್ಳಿ ಬಂದರು, ಕುಂದಾಪುರ, ಕೋಟೇಶ್ವರ ಮತ್ತು ತೆಕ್ಕಟ್ಟೆಯ ಕೋಡಿ ಕಿನಾರೆಯಲ್ಲಿ ಹಾಗೂ ಸೆಪ್ಟೆಂಬರ್ 5 ರಂದು ರಂದು ಉಡುಪಿ ತಾಲೂಕಿನ ಹೆಜಮಾಡಿ/ಪಡುಬಿದ್ರಿಯ ಪಲಿಮಾರು ಮೀನುಗಾರರ ಸಭಾ ಭವನದ ಬಳಿ ಉಚ್ಚಿಲದ ಸುಬಾಷ್ ರೋಡ್ ಬೀಚ್ ಹತ್ತಿರ, ಮಲ್ಪೆ-ಪಡುಕೆರೆಯ ಬೋಟ್ ಕಚೇರಿ ಹತ್ತಿರ, ಮಲ್ಪೆ-ಕೊಳ ಇಲ್ಲಿನ ಹನುಮಾನ್
ವಿಠೋಭ ಮಂದಿರ ಮುಂಭಾಗದಲ್ಲಿ, ಸಾಸ್ತಾನ-ಕೋಡಿಕನ್ಯಾನ (ಸಾಸ್ತಾನ ಕೋಡಿ ಜೆಟ್ಟಿ), ಕಾಪು ಲೈಟ್ಹೌಸ್, ಎರ್ಮಾಳ್ (ಉಚ್ಚಿಲ ಅಥವಾ ಕಾಪು) ಹಾಗೂ ಹಂಗಾರಕಟ್ಟೆ/ಬೆಂಗ್ರೆ (ಕೋಡಿಬೆಂಗ್ರೆ ಸ್ಥಳಗಳಲ್ಲಿ ದೋಣಿಗಳ ಭೌತಿಕ ಪರಿಶೀಲನೆ ನಡೆಸಲಿದ್ದು, ದೋಣಿ ಮಾಲಿಕರು ಖುದ್ದಾಗಿ ಮೀನುಗಾರಿಕಾ ದೋಣಿಗಳನ್ನು ತಪಾಸಣೆಗೆ ಹಾಜರುಪಡಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕಿ ಸೇವೆಯಿಂದ ವಜಾ
ಉಡುಪಿ: ಕಾರ್ಕಳ ತಾಲೂಕು ಎಣ್ಣೆಹೊಳೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಬಿ ಅವರು, ಈ ಹಿಂದೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಾಗೂ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣಾ ವರದಿಯನ್ವಯ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ, ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನ್ವಯ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುತ್ತೂರು ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ
ಪತ್ರಿಕಾ ಮಾಧ್ಯಮಗಳ ಸ್ವಾತಂತ್ರ್ಯ ಹರಣಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದ ಕೋರ್ಟ್
ಪುತ್ತೂರು ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಜಯ
ಪುತ್ತೂರು: ಸುಳ್ಯ ಪೊಲೀಸರು ಮಾಧ್ಯಮಗಳ ಮೇಲೆ ದಾಖಲಿಸಿದ್ದ ಸುಳ್ಳು ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ವಿಶೇಷ ಎಂದರೆ ಪೊಲೀಸರು ದಾಖಲಿಸಿರುವ ಕೇಸಿಗೆ ಮಾಧ್ಯಮ ಪ್ರತಿನಿಧಿಗಳು ಜಾಮೀನು ಪಡೆಯುವ ಮೊದಲೇ ರಾಜ್ಯ ಉಚ್ಛ ನ್ಯಾಯಾಲಯ ಪತ್ರಕರ್ತರಿಗೆ ನ್ಯಾಯ ಒದಗಿಸಿದೆ. ಇತರ ಪತ್ರಕರ್ತರ ಸಂಘದ ಸದಸ್ಯರ ಮೇಲೆ ಕೇಸು ದಾಖಲಾಗಿದ್ದರೂ ಅದು ಪರ್ಯಾಯ ಪತ್ರಕರ್ತರ ಸಂಘ ಎಂದು ಪರಿಗಣಿಸದೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕ ನಡೆಸಿದ್ದ ಕಾನೂನು ಹೋರಾಟಕ್ಕೆ ಜಯ ದೊರೆತಿದೆ.
ಘಟನೆ ವಿವರ :
ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನೋರ್ವ ಕಾರಿನಲ್ಲಿ ಸುತ್ತಾಟ ನಡೆಸಿದ್ದಾನೆ ಎಂದು ಹಿಂದೂ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಸುಳ್ಯ ಠಾಣಾ ಪೊಲೀಸರು ಆರೋಪಿತ ಯುವಕರನ್ನು ವಶಕ್ಕೆ ಪಡೆದಿದ್ದರು.ವಿಷಯ ಸುದ್ದಿಯಾಗುತ್ತಲೇ ಹಿಂದೂ ಫೈರ್ ಬ್ರಾಂಡ್ ನಾಯಕ ಎಂದು ಕರೆಸಿಕೊಳ್ಳುವ ಅರುಣ್ ಕುಮಾರ್ ಪುತ್ತಿಲ ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಯುವಕರನ್ನು ರಿಲೀಸ್ ಮಾಡಿದ್ದಾರೆ ಎಂದು ವೆಬ್ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.
ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿ ಅಂತರ್ಜಾಲದಲ್ಲಿ ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿತ್ತು ಮಾಧ್ಯಮಗಳ ಮೇಲಿನ ಕೇಸು ದಾಖಲಾತಿಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ತಾಲೂಕು ಜರ್ನಲಿಸ್ಟ್ ಯೂನಿಯನ್ ಘಟಕ ಯೂನಿಯನ್ ಜಿಲ್ಲಾ ಮತ್ತು ರಾಜ್ಯ ಸಮಿತಿಯ ನಿರ್ದೇಶನದಂತೆ ಹೈಕೋರ್ಟ್ ಮೊರೆ ಹೋಗಿತ್ತು.
ಘಟನೆಗೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಧಾರಗಳ ಜೊತೆ ನೇರ ಹಾಗೂ ಸ್ಪಷ್ಟ ಮಾಹಿತಿಯನ್ನು ಭಿತ್ತರಿಸಿದ ಮಾಧ್ಯಮಗಳ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಕ್ಯಾಮ್ ಹೈಕೋರ್ಟಲ್ಲಿ ಈ ಬಗ್ಗೆ ವಾದ ಮಂಡಿಸಿದ್ದರು. ನ್ಯಾಯವಾದಿಗಳಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದರು.ಈ ಘಟನೆಗೆ ಸಂಬಂಧಪತಿ ಮಾಧ್ಯಮಗಳ ಮೇಲೆ ದಾಖಲಾದ ಎಫ್.ಐ.ಆರ್.ಮೇಲೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪತ್ರಿಕಾ ಮಾಧ್ಯಮಗಳ ಸ್ವಾತಂತ್ರ್ಯ ಹರಣಕ್ಕೆ ಮುಂದಾದ ಪೊಲೀಸ್ ಇಲಾಖೆಗೆ ಚಾಟಿ ಬೀಸಿದೆ.
ಸೆಪ್ಟೆಂಬರ್ನಲ್ಲಿ 8 ದಿನ ಬ್ಯಾಂಕ್ಗೆ ರಜೆ!
ಉಡುಪಿ: ಈಗಾಗಲೇ ಹಬ್ಬಗಳ ಋತು ಆರಂಭಗೊಂಡಿದ್ದು, ಸೆಪ್ಟೆಂಬರ್ನಲ್ಲಿ ಬ್ಯಾಂಕ್ಗಳಿಗೆ ರವಿವಾರ ಸೇರಿ ಒಟ್ಟು 8 ದಿನಗಳ ಕಾಲ ರಜೆ ಇರಲಿದೆ. ಸೆ. 18ರಂದು (ಚೌತಿ ನಿಮಿತ್ತ), ಸೆ. 28ರಂದು ಈದ್ ಮಿಲಾದ್, ಸೆ. 9ಕ್ಕೆ ಎರಡನೇ ಶನಿವಾರ, ಸೆ. 23ಕ್ಕೆ ನಾಲ್ಕನೇ ಶನಿವಾರ, ಸೆ. 3, ಸೆ. 10, ಸೆ. 17 ಹಾಗೂ ಸೆ. 24ರಂದು ರವಿವಾರದ ರಜೆ ಇರುತ್ತದೆ. ರಜಾ ದಿನಗಳಲ್ಲಿ ಎಟಿಎಂಗಳಲ್ಲಿ ಹಣದ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ
ಉಡುಪಿ :ಸೆ. 12 ರಂದು ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 12 ರಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ.
ಸ್ಪರ್ಧೆಗಳ ವಿವರ:
ಪುರುಷ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್ ಸ್ಪರ್ಧೆಗಳು, ಪುರುಷರಿಗೆ ಗುಂಪು ಆಟಗಳಾದ ವಾಲಿಬಾಲ್, ಖೋ ಖೋ, ಕಬಡ್ಡಿ, ಫುಟ್ಬಾಲ್, ಪ್ರೋಬಾಲ್, ಯೋಗ ಹಾಗೂ ಮಹಿಳೆಯರಿಗೆ ವಾಲಿಬಾಲ್, ಖೋ-ಖೋ, ಕಬಡ್ಡಿ, ದ್ರೋಬಾಲ್ ಹಾಗೂ ಯೋಗ ಸ್ಪರ್ಧೆಗಳು ನಡೆಯಲಿದೆ.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ಗುಂಪು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಕ್ರೀಡಾಕೂಟಕ್ಕೆ ಹೆಸರು ಹಾಗೂ ತಂಡಗಳನ್ನು ನೋಂದಾಯಿಸಲು ಸೆಪ್ಟೆಂಬರ್ 8 ಕೊನೆಯ ದಿನವಾಗಿದ್ದು, ಕ್ರೀಡಾಕೂಟ ನಡೆಯುವ ದಿನದಂದು ನೋಂದಾವಣೆಗೆ ಅವಕಾಶ ಇರುವುದಿಲ್ಲ. ಸೆ.9 ರಂದು ಫುಟ್ಬಾಲ್ ಸ್ಪರ್ಧೆಯು ಎಂ.ಜೆ.ಪಿ ಕ್ರೀಡಾಂಗಣದಲ್ಲಿ ಹಾಗೂ ಸೆ.10 ರಂದು ಬ್ರಹ್ಮಾವರದ ಸ.ಪ.ಪೂ ಕಾಲೇಜಿನಲ್ಲಿ ಖೋ-ಖೋ ಸ್ಪರ್ಧೆಗಳು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ.ಸಂಖ್ಯೆ: 0820-2521324, ಮೊ.ನಂ: 9480886467 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.