ಗುರುಗಳಿಗೆ ಶಿಷ್ಯಂದಿರ ನಮನ.!
– ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲು ಎಲ್ಲಾಕಡೆ ಸಿದ್ಧತೆ
– ಅಕ್ಷರ ಕಲಿಸಿದ ಗುರುಗಳಿಗೆ ವಂದನೆ
NAMMUR EXPRESS NEWS
ಗುರುವಿನ ಆಶಿರ್ವಾದದಿಂದ ಮಾತ್ರ ನಾವು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗಲು ಸಾಧ್ಯ. ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜದ ಸಮರ್ಥ ವ್ಯಕ್ತಿನ್ನಾಗಿ ರೂಪಿಸುವವರು ಶಿಕ್ಷಕರು. ನಮ್ಮ ಉಜ್ವಲ ಭವಿಷ್ಯವನ್ನು ರೂಪಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ನಮ್ಮ ಜೀವನದಲ್ಲಿ ಗುರುವಿಗೆ ಬಹಳ ಮಹತ್ವವಿದೆ. ಗುರುವಿಲ್ಲದೆ ಜ್ಞಾನವನ್ನು ಪಡೆಯುವುದು ಅಸಾಧ್ಯ. ಗುರುವಿನ ಆಶೀರ್ವಾದದಿಂದ ನಾವು ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತೇವೆ. ಗುರುಗಳಿಂದ ಪಡೆದ ಜ್ಞಾನ ಮತ್ತು ಮಾರ್ಗದರ್ಶನದಿಂದ ಮಾತ್ರ ನಾವು ಯಶಸ್ಸಿನ ಶಿಖರವನ್ನು ತಲುಪಬಹುದು. ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇಂತಹ ಅದ್ಭುತ ಶಿಕ್ಷಕರಲ್ಲಿ ಒಬ್ಬರಾದ, ಶ್ರೇಷ್ಠ ಶಿಕ್ಷಣ ತಜ್ಞ, ವಿದ್ವಾಂಸ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆಯು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಶಿಕ್ಷಕರನ್ನು ಗೌರವಿಸುವ ದಿನವಾಗಿದೆ.
ಶಿಕ್ಷಕರ ದಿನವನ್ನು ಏಕೆ ಆಚರಿಸಲಾಗುತ್ತದೆ:
ಶಿಕ್ಷಣ ತಜ್ಞರಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಶಿಕ್ಷಣ ನೀಡಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಿತ್ತುವುದರಲ್ಲಿ ಕಳೆದರು. ಶಿಕ್ಷಣಕ್ಕಾಗಿ ಅವರ ಮಹಾನ್ ಕೊಡುಗೆಯನ್ನು ಗೌರವಿಸಲು ಮತ್ತು ರಾಷ್ಟ್ರದ ಮಾರ್ಗದರ್ಶಕ ಶ್ರೇಣಿಯಲ್ಲಿ ನಿಂತಿರುವ ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಾಲೆಯ ತರಗತಿ ಕೊಠಡಿಗಳನ್ನು ವಿಶೇಷವಾಗಿ ಅಲಂಕಾರ ಮಾಡಿ, ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಶಾಲೆಯ ಸಭಾಂಗಣವನ್ನು ಪರಿಸರ ಸ್ನೇಹಿತ ವಸ್ತ್ರಗಳಿಂದ ಅಲಂಕರಿಸಲು ಸಿದ್ಧತೆ ನಡೆಯುತ್ತಿದ್ದು, ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳು ಹಾಗೂ ಭರತನಾಟ್ಯ, ಮಿಮಿಕ್ರಿ, ಏಕವ್ಯಕ್ತಿ ನೃತ್ಯ ಸೇರಿದಂತೆ ಮೆಗಾ ಸಾಂಸ್ಕೃತಿಕ ಸಂಭ್ರಮ ನಡೆಸಲು ತಯಾರಿ ನಡೆಯುತ್ತಿದೆ.