ಉಡುಪಿ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಸಂಭ್ರಮ!
– ಎರಡು ದಿನ ಕೃಷ್ಣ ದೇಗುಲದಲ್ಲಿ ಹಬ್ಬದ ವಾತಾವರಣ
– ಇಂದು ರಾತ್ರಿ ಕನಕನ ಕಿಂಡಿ ತೆರೆದು ಭಕ್ತರಿಗೆ ಅವಕಾಶ
NAMMUR EXPRESS NEWS
ಉಡುಪಿ: ಕೃಷ್ಣ ನಗರಿ ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಮುಗಿಲು ಮುಟ್ಟಿದೆ.ಶ್ರೀಕೃಷ್ಣ ಮಠದಲ್ಲಿ ಸೆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ.7ರಂದು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಜರಗಲಿದೆ. ಶ್ರೀಕೃಷ್ಣ ಮಠದಲ್ಲಿ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣ ಮಠದಲ್ಲಿ ಆ. 6ರಂದು ಬೆಳಗ್ಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಿ, ಮಹಾಪೂಜೆ ನೆರವೇರಿಸಿದ್ದಾರೆ.
ಅನಂತರ ರಾತ್ರಿ ಪೂಜೆ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಶ್ರೀಪಾದರು ಲಡ್ಡಿಗೆ ಮುಹೂರ್ತ ಮಾಡಿದ್ದಾರೆ. ಶ್ರೀಗಳೂ ಸಹಿತ ಭಕ್ತರು, ಶಿಷ್ಯ ವರ್ಗ ಏಕಾದಶಿಯಂತೆ ನಿರ್ಜಲ ಉಪವಾಸವಿದ್ದು ಕೃಷ್ಣಾಷ್ಟಮಿ ವ್ರತ ಆಚರಿಸಿದ್ದಾರೆ. ಆದ್ದರಿಂದ ರಾತ್ರಿಯೂ ಅರ್ಚನೆ, ಮಹಾಪೂಜೆಯನ್ನು ನಡೆಸುವ ಶ್ರೀಗಳು ಬೆಳಗ್ಗೆ ಮುಹೂರ್ತ ಮಾಡಿದ ಲಡ್ಡುಗಳನ್ನು ಶ್ರೀಕೃಷ್ಣನಿಗೆ ನಿವೇದನೆ ಮಾಡಿದ್ದಾರೆ. ಬಳಿಕ ರಾತ್ರಿ ಚಂದ್ರೋದಯದ ವೇಳೆ 11.42ಕ್ಕೆ ಕೃಷ್ಣಾ ಪ್ರದಾನ ನೆರವೇರಿಸುವರು.
ಗುರುವಾರ ದ್ವಾದಶಿ ರೀತಿಯಲ್ಲಿ ಮುಂಜಾವ ಎಲ್ಲ ವಿಧದ ಪೂಜೆಗಳನ್ನು ಶ್ರೀಪಾದರು ನೆರವೇರಿಸಿ ಶ್ರೀಕೃಷ್ಣ ಮಠದಲ್ಲಿ ರಾತ್ರಿ ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅರ್ತ್ಯ ಪ್ರದಾನ ಬಿಡಲು ಭಕ್ತರಿಗೆ ಅನುವು ಮಾಡಿಕೊಡಲಾಗುತ್ತದೆ. ಶ್ರೀಕೃಷ್ಣ ಮಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಕೃಷ್ಣ ಮಠದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ದೇವರ ದರ್ಶನ ಎಂದಿನಂತೆ ಇರಲಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣನ ಕಣ್ಮನ ಸೆಳೆಯುವ ಅಲಂಕಾರ ಎಲ್ಲರ ಗಮನ ಸೆಳೆಯಿತು.