ತೀರ್ಥಹಳ್ಳಿ ತುಂಗಾ ನದಿ ಬಳಿ ಬೃಹತ್ ಹೆಬ್ಬಾವು!
– ತೀರ್ಥಹಳ್ಳಿ ಪಟ್ಟಣದ ಬಳಿಯೇ ಪತ್ತೆ: ಜನರಿಗೆ ಭೀತಿ
– ತೀರ್ಥಹಳ್ಳಿ: ಭೀಮನ ಕಟ್ಟೆ ನದಿಯಲ್ಲಿ ಮತ್ತೊರ್ವ ಪ್ರವಾಸಿಗನ ಮೃತದೇಹ ಪತ್ತೆ
– ಶಿವಮೊಗ್ಗ: ಮುಖ್ಯ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿದವ ಅರೆಸ್ಟ್!
– ಶಿವಮೊಗ್ಗ :ಪೊಲೀಸ್ ಕ್ವಾರ್ಟರ್ಸ್ನಲ್ಲಿಯೇ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ
NAMMUR EXPRESS NEWS
ತೀರ್ಥಹಳ್ಳಿ ಪಟ್ಟಣವ್ಯಾಪ್ತಿಯ ತುಂಗಾ ನದಿಯಲ್ಲಿ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ ಹದಿನಾಲ್ಕರ ಕುರುವಳ್ಳಿ ಗಣಪತಿ ಪೆಂಡಲ್ ಹಿಂಭಾಗ ತುಂಗಾ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ಹೆಬ್ಬಾವು ಪ್ರತ್ಯಕ್ಷವಾಗಿದೆ. ಹೆಬ್ಬಾವು ಇರುವ ವಿಷಯ ತಿಳಿಯುತ್ತಿದ್ದಂತೆ ಕುರುವಳ್ಳಿಯ ಜನರು ಹೆಬ್ಬಾವು ನೋಡಲು ನದಿಯ ತೀರಕ್ಕೆ ಆಗಮಿಸಿದ್ದರು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಇತ್ತೀಚಿಗೆ ತೀರ್ಥಹಳ್ಳಿ ಭಾಗದಲ್ಲಿ ಅತೀ ಹೆಚ್ಚು ಹಾವುಗಳು ಊರಿಗೆ ಬರುತ್ತಿವೆ.
ಭೀಮನ ಕಟ್ಟೆ ನದಿಯಲ್ಲಿ ಮತ್ತೊಂದು ಮೃತದೇಹ ಪತ್ತೆ!
ಬೆಂಗಳೂರಿಂದ ಭೀಮನ ಕಟ್ಟೆಗೆ ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದರು. ಕಳೆದ ಎರಡು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದೀಗ ಮತ್ತೊಬ್ಬನ ಶವ ಪತ್ತೆಯಾಗಿದೆ. ಸೋಮವಾರ ಗೌತಮ್ ಮೃತ ದೇಹ ಪತ್ತೆಯಾಗಿತ್ತು. ಇದೀಗ ಸುಜಯ್ ಎಂಬ ಯುವಕನ ಮೃತ ದೇಹವೂ ತುಂಗಾ ನದಿಯ ದಡದಲ್ಲಿ ಪತ್ತೆಯಾಗಿದ್ದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿದ ಭೂಪ!
ಶಿವಮೊಗ್ಗ ಮುಖ್ಯ ರಸ್ತೆಯಲ್ಲಿ ಮಚ್ಚು ತೋರಿಸುತ್ತ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಆರೋಪದ ಹಿನ್ನೆಲೆ ಯುವಕನನ್ನು ಬಂಧಿಸಲಾಗಿದೆ. ಮಿಳಘಟ್ಟ ಮುಖ್ಯ ರಸ್ತೆಯಲ್ಲಿ ಚಂದನ್ ಅಲಿಯಾಸ್ ಚೋಟು (23) ಎಂಬಾತ ಮಚ್ಚು ಹಿಡಿದು ಜನರಲ್ಲಿ ಭಯ ಹುಟ್ಟಿಸುತ್ತ ಓಡಾಡುತ್ತಿದ್ದ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆಯ ಪಿಎಸ್ಐ ಶೀನಿವಾಸ್, ಸಿಬ್ಬಂದಿ ರಮೇಶ್ ಮತ್ತು ನಿತಿನ್ ಸ್ಥಳಕ್ಕೆ ಭೇಟಿ ನೀಡಿ ಯುವಕನನ್ನು ವಶಕ್ಕೆ ಪಡೆದ್ದಾರೆ. ಈ ವೇಳೆ ಮಚ್ಚು ಹಿಡಿದು ಓಡಾಡುತ್ತಿರುವುಕ್ಕೆ ಕಾರಣ ಕೇಳಿದಾಗ ಉತ್ತರಿಸಲು ಯುವಕ ತಡಬಡಾಯಿಸಿದ್ದಾನೆ. ಕೂಡಲೆ ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕ್ವಾರ್ಟರ್ಸ್ನಲ್ಲಿಯೇ ಕಳ್ಳತನ!
ಶಿವಮೊಗ್ಗ : ಪೊಲೀಸ್ ಕ್ವಾರ್ಟರ್ಸ್ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಸೈಕಲ್ ಕಳ್ಳತನ ಮಾಡಲಾಗಿದೆ. ವ್ಯಕ್ತಿಯೊಬ್ಬ ಬೆಳಗಿನ ಜಾವ ಸೈಕಲ್ ಕದ್ದುಕೊಂಡ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಟೆ ರಸ್ತೆಯ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಘಟನೆ ಸಂಭವಿಸಿದೆ. ಸೆ.5ರಂದು ಬೆಳಗಿನ ಜಾವ 4.30ರ ಹೊತ್ತಿಗೆ 25 ರಿಂದ 30 ವರ್ಷದ ಯುವಕನೊಬ್ಬ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಮನೆ ಎದುರು ಇರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.