ಮರದ ಕೊಂಬೆ ಬಿದ್ದು ಕಾರ್ಮಿಕ ಸಾವು!
– ಬಾಳೆಹೊನ್ನೂರು ಬಳಿ ನಡೆದ ಘಟನೆ
– ಚಿಕ್ಕಮಗಳೂರು: ರೈಲು ಮಾರ್ಗ ಸ್ಥಾಪನೆ ಪ್ರವಾಸೋದ್ಯಮಕ್ಕೆ ಅನುಕೂಲ
– ಚಿಕ್ಕಮಗಳೂರು: ಮೀಸಲು ಅರಣ್ಯ ಘೋಷಣೆ., ರೈತರ ಹೋರಾಟ
– ತರೀಕೆರೆ: ರಸ್ತೆಗಳಲ್ಲಿ ವೀಲಿಂಗ್ ಹಾವಳಿ ಮಾಡುವವರಿಗೆ ಬಿತ್ತು 5000ರೂ ದಂಡ
NAMMUR EXPRESS NEWS – ಬಾಳೆಹೊನ್ನೂರು: ಭದ್ರಾ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ತಲೆಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರನ್ನು ಮಧ್ಯಪ್ರದೇಶದ ರಾಮ್ ಬಾಯ್ (35) ಎಂದು ಗುರುತಿಸಲಾಗಿದೆ. ದಿಢೀರ್ ಆಗಿ 50 ಅಡಿಗೂ ಎತ್ತರದಿಂದ ಮರದ ತಲೆಯ ಮೇಲೇ ಬಿದ್ದ ಪರಿಣಾಮ ಸಾವು ಸಂಭವಿಸಿದೆ. ಮೃತರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಎಸ್ಟೇಟ್ನ ಪೆಡ್ರಿಕ್ ಮಸ್ಕರೇನಿಸ್ ಎಂಬುವರು ದೂರು ನೀಡಿದ್ದು, ಠಾಣಾಧಿಕಾರಿ ವಿ.ಟಿ.ದಿಲೀಪ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರೈಲು ಮಾರ್ಗ ಸ್ಥಾಪನೆ ಪ್ರವಾಸೋದ್ಯಮಕ್ಕೆ ಅನುಕೂಲ
ಚಿಕ್ಕಮಗಳೂರು: ಹಾಸನ ಮತ್ತು ಚಿಕ್ಕಮಗಳೂರು ನಡುವಿನ ನೇರ ರೈಲು ಮಾರ್ಗ ನಿರ್ಮಾಣ ಯೋಜನೆಯ ಮೊದಲ ಹಂತದ ಸಿವಿಲ್ ಕಾಮಗಾರಿ ಆರಂಭವಾಗಿದೆ.ಆದರೆ, ಬೇಲೂರು-ಹಾಸನ ನಡುವಿನ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಆರಂಭವಾಗಿಲ್ಲ.ಚಿಕ್ಕಮಗಳೂರು-ಹಾಸನ ನಡುವೆ ಹಾಸನ-ಬೆಂಗಳೂರು ಮತ್ತು ಹಾಸನ-ಮೈಸೂರು ನಡುವೆ ನೇರ ರೈಲು ಮಾರ್ಗ ಇದ್ದು ಹಾಸನ-ಚಿಕ್ಕಮಗಳೂರು ನಡುವೆ ರೈಲು ಮಾರ್ಗ ನಿರ್ಮಾಣವಾದರೆ ಚಿಕ್ಕಮಗಳೂರು ಬೆಂಗಳೂರು ಚಿಕ್ಕಮಗಳೂರು-ಮೈಸೂರು ನಡುವೆ ನೇರ ರೈಲು ಮಾರ್ಗ ನಿರ್ಮಾಣವಾದಂತಾಗುತ್ತದೆ.
ಮೀಸಲು ಅರಣ್ಯ ಘೋಷಣೆ: ರೈತರ ಹೋರಾಟ
ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ನಿವಾರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಸ್ತೂರಿ ರಂಗನ್ ಮತ್ತು ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಶಾಸಕ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಶಾಸಕ ಎಚ್.ಡಿ.ತಮ್ಮಯ್ಯ ಅವರು ‘ಶೋಷಿತರ ಬಡವರ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ಹೇಳಿದರು.ಹೋರಾಟ ಸಮಿತಿಯ ಸಂಚಾಲಕರಾದ ಕೆ.ಕೆ.ರಘು, ವಾಸು ಪೂಜಾರಿ, ಶಾಂತಕುಮಾರ್, ಚಂದ್ರೇಗೌಡ, ಮುಸಾದಿಕ್ ಪಾಷಾ, ಕೃಷ್ಣಪ್ಪ, ಪ್ರವೀಣ್, ಉಮೇಶ್, ಮನು ಆರಾಧ್ಯ, ಚಂದ್ರು, ಕುಮಾರ್, ವೀರಭದ್ರಪ್ಪ ಇದ್ದರು.
ರಸ್ತೆಗಳಲ್ಲಿ ವೀಲಿಂಗ್ ಹಾವಳಿ ಮಾಡುವವರಿಗೆ ಬಿತ್ತು 5,000ರೂ ದಂಡ!
ಮೋಟಾರ್ ಸೈಕಲ್ ನಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗೇರ್ ಮರಡಿ ರಸ್ತೆಯಲ್ಲಿ ನಡೆದಿದೆ. ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನನ್ನು ಕೂರಿಸಿಕೊಂಡು ವೀಲಿಂಗ್ ಮಾಡುತ್ತಿದ್ದ ಸುಮಾರು 22 ವರ್ಷ ವಯಸ್ಸಿನ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯವು 5,000 ರೂ.ಗಳ ದಂಡ ವಿಧಿಸಿದೆ.