ದೆಹಲಿಯಲ್ಲಿ ಸಿಕ್ಕ ಶಂಕಿತ ಉಗ್ರ ಶೀಘ್ರ ತೀರ್ಥಹಳ್ಳಿಗೆ?!
– ತೀರ್ಥಹಳ್ಳಿ, ಮಂಗಳೂರು, ಶಿವಮೊಗ್ಗದಲ್ಲಿ ಸ್ಥಳ ಮಹಜರು?
– ಮಗ ತಪ್ಪು ಮಾಡಿಲ್ಲ, ಆತನ ಸಿಕ್ಕಿಸಲಾಗಿದೆ: ಅರಾಫತ್ ತಂದೆ
NAMMUR EXPRESS NEWS
ಮಂಗಳೂರು/ ತೀರ್ಥಹಳ್ಳಿ: ಮಲೆನಾಡು ಸೇರಿದಂತೆ ಕರ್ನಾಟಕದಲ್ಲಿನ ಭಯೋತ್ಪಾದನಾ ಚಟುವಟಿಕೆ ಕಿಂಗ್ ಪಿನ್ ಆಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾಗಿದ್ದ ಆರೋಪಿ ಅರಾಫತ್ ಅಲಿ ಎಂಬಾತನನ್ನು ಎನ್ಐಎ ಪೊಲೀಸರು ಬಂಧಿಸಿದ್ದು ಶೀಘ್ರದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಮಂಗಳೂರಿಗೆ ಕರೆ ತಂದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಶಿವಮೊಗ್ಗ ಮೂಲದ ಭಯೋತ್ಪಾದಕ ಸಂಚುಗಾರ ಅರಾಫತ್ ಅಲಿ ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಪೊಲೀಸರು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು ಈತ ಉಗ್ರ ಚಟುವಟಿಕೆಗೆ ಫಂಡ್ ಮಾಡುತ್ತಿದ್ದ ಎನ್ನಲಾಗಿದೆ. ಜೊತೆಗೆ ರಾಜ್ಯದಲ್ಲಿ ನಡೆದ ಪ್ರಮುಖ ಉಗ್ರ ದಾಳಿಗೆ ಸಾಥ್ ನೀಡಿದ್ದ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.
ದೇಶ ಬಿಟ್ಟು ಹೋಗಿದ್ದ…!
ಮೂಲತಃ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ 2020ರ ಬಳಿಕ ತಲೆಮರೆಸಿಕೊಂಡಿದ್ದ. 2020ರಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ಅರಾಫತ್ ಅಲಿ ದೇಶ ಬಿಟ್ಟು ಹೋಗಿದ್ದನು. ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪಿ. ಹಲವು ಭಯೋತ್ಪಾದಕ ಕೃತ್ಯಗಳಿಗೆ ಯೋಜಿಸಿದ್ದ. ಬಳಿಕ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ.
ಮಂಗಳೂರು, ಶಿವಮೊಗ್ಗ ಸ್ಫೋಟ ಪ್ಲಾನ್ ಅಲ್ಲಿ ಕೈ!
ಕೀನ್ಯಾದ ನೈರೋಬಿಯಾದಿಂದ ದೆಹಲಿಗೆ ವಾಪಾಸ್ ಆಗುತ್ತಿದ್ದಾಗ ಎನ್ಐಎ ಬಲೆಗೆ ಬಿದ್ದಿದ್ದಾನೆ. ಮಂಗಳೂರು ಕುಕ್ಕರ್ ಬಂದ್ ಸ್ಪೋಟದ , ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೇ ಮಂಗಳೂರಿನ ಕದ್ರಿ ಮಂಜುನಾಥ ದೇಗುಲದ ಬಳಿ ಸ್ಪೋತ ನಡೆಸುವ ಸಲುವಾಗಿ ಕುಕ್ಕರ್ ಬಾಂಬ್ ತೆಗೆದುಕೊಂಡು ಹೋಗಿದ್ದ ಮೊಹಮ್ಮದ್ ಶಾರೀಖ್ ಜತೆಯೂ ಸಂಪರ್ಕದಲ್ಲಿದ್ದ ಎಂದು ಎನ್ ಐಎ ತಿಳಿಸಿದೆ.
ಮಗ ತಪ್ಪು ಮಾಡಿಲ್ಲ, ಆತನ ಸಿಕ್ಕಿಸಲಾಗಿದೆ: ಅರಾಫತ್ ತಂದೆ
ಅರಾಫತ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಅವನು ದುಬೈಗೆ ಹೋಗಿ ಮೂರುವರೆ ವರ್ಷ ಆಯ್ತು, ಅವನೇನು ಮಾಡಿಲ್ಲ.. ಸುಮ್ಮನೆ ಸಿಕ್ಕಿಸಿ ಹಾಕ್ಸಿದ್ದಾರೆ ಎಂದು ಅರಾಫತ್ ಅಲಿ ತಂದೆ ಅಹಮದ್ ಬಾವ ಹೇಳಿಕೆ ನೀಡಿದ್ದಾರೆ.
ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಮಾಡಿ ಫೇಲ್ ಆಗಿದ್ದ. ದುಬೈ ಅಲ್ಲಿ ಫರ್ಪ್ಯೂಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊನೆವರೆಗೂ ಅಲ್ಲೆ ಇದ್ದ. ಆಗಾಗ ಹಣ ಕೂಡ ಕಳಿಸುತ್ತಿದ್ದ. ನಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಹೇಳಿದ್ದಾರೆ.
ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಪೊಲೀಸರು ಮನೆಗೆ ಬಂದಿದ್ದರು. ಆ ಕೇಸಲ್ಲಿ ಸಿಕ್ಕವರು ಆತನ ಸ್ನೇಹಿತರು. ಹಾಗಾಗೀ ಕೇಸ್ ಹಾಕಿದ್ದಾರೆ ಎಂದರು. ಮಗನನ್ನು ನೋಡಿ ಮೂರುವರೆ ವರ್ಷ ಆಯ್ತು. ಆಗಾಗ ಕಾಲ್ ಮಾಡಿ ವಿಚಾರಿಸುತ್ತಿದ್ದ. ಕಡೆಯದಾಗಿ ಒಂದು ತಿಂಗಳ ಹಿಂದೆ ಕಾಲ್ ಮಾಡಿದ್ದ. ಮನೆಗೆ ಹಣ ಕಳಿಸೋದನ್ನ ಒಂದು ವರ್ಷದ ಹಿಂದೆಯೇ ನಿಲ್ಲಿಸಿದ್ದಾನೆ. ನಮಗೆ ನ್ಯಾಯ ಬೇಕು. ಅವನು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ, ಅವನಾದ್ರೂ ಅಷ್ಟೆ. ನಾನಾದ್ರೂ ಅಷ್ಟೇ ಎಂದ ಅರಾಫತ್ ಅಲಿ ತಂದೆ ಅಹಮದ್ ಬಾವ ಹೇಳಿಕೆ ನೀಡಿದ್ದಾರೆ.