168 ಇಲಿ ಹಿಡಿಯಲು 69 ಲಕ್ಷ ಖರ್ಚು!
– ಭಾರತೀಯ ರೈಲ್ವೆ ಮಹಾ ವಂಚನೆ: ಏನಿದು ಇಲಿ ಹಗರಣ?
– ಸೊಳ್ಳೆಗೆ ಹಾಕಿದ್ದ ಹೊಗೆಗೆ ಉಸಿರುಗಟ್ಟಿ ನಾಲ್ವರು ಸಾವು
NAMMUR EXPRESS NEWS
ದೊಡ್ಡಬಳ್ಳಾಪುರ: ಸೊಳ್ಳೆ ಕಾಟಕ್ಕೆ ಹಾಕಿದ್ದ ಹೊಗೆಯಿಂದ ಉಸಿರುಗಟ್ಟಿ ಕೂಲಿ ಕಾರ್ಮಿಕರಾಗಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರದಲ್ಲಿ ಭಾನುವಾರ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ಗ್ರಾಮದ ಒಡೆಯರಹಳ್ಳಿ ರಸ್ತೆಯಲ್ಲಿರುವ ಮೋಹನ್ ಕುಮಾರ್ ಎಂಬುವರ ಕೋಳಿಫಾರಂ ಶೆಡ್ನಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಕಾಲೇ ಸರೇರಾ, ಲಕ್ಷ್ಮಿಸರೇರಾ , ಉಷಾ ಸರೇರಾ ಮತ್ತು ಪೊಲ್ ಸರೇರಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲಿ ಹಿಡಿಯಲು 69 ಲಕ್ಷ ಹಣ ಖರ್ಚು ಮಾಡಿದ ರೈಲ್ವೆ ಇಲಾಖೆ
ಭಾರತೀಯ ರೈಲ್ವೆ ಇಲಾಖೆಯು ಇಲಿಗಳನ್ನು ಹಿಡಿಯಲು ಲಕ್ಷ ಲಕ್ಷ ಹಣ ಖರ್ಚು ಮಾಡಿದೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಅವರು ಆರೋಪಿಸಿದ್ದಾರೆ. ಈ ಕುರಿತು ಅವರ ಹೇಳಿಕೆ ಈಗ ವೈರಲ್ ಆಗಿದೆ. ಉತ್ತರ ರೈಲ್ವೆಯ ಲಕ್ನೋ ವಿಭಾಗವು 2020- 22ರ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಅವರು ಟ್ವಿಟ್ ನಲ್ಲಿ ತಿಳಿಸಿದ್ದಾರೆ. ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸಂಜಯ್ ಸಿಂಗ್, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರೀಯ ತನಿಖಾ ದಳ ಎಲ್ಲಿವೆ ಎಂದು ಪ್ರಶ್ನಿಸಿದ್ದಾರೆ. ಕೇವಲ ಇಲಿಗಳನ್ನು ಹಿಡಿಯಲು ರೈಲ್ವೆ ಇಲಾಖೆಯು ಇಷ್ಟೊಂದು ಹಣ ಪೋಲು ಮಾಡಿದೆಯೇ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.