ಕಷ್ಟ ಪಟ್ಟು ಸಂಪಾದಿಸಿದ ಹಣ ವಂಚಕರ ಕೈಗೆ.!
-ಬ್ಯಾಂಕ್ ಮ್ಯಾನೇಜರ್ ಹೆಸರಲ್ಲಿ ಅಕೌಂಟ್ ಅಲ್ಲಿದ್ದ ಹಣ ಮಾಯ
– ಪಡುಬಿದ್ರಿಯ ತೆಂಕ ಎರ್ಮಾಳಿನ ವ್ಯಕ್ತಿಗೆ ಮೋಸ
– ಉಪ್ಪಿನಂಗಡಿ: ಮರದ ದಿಮ್ಮಿಗಳ ಸಾಗಾಟ ಮಾಡುತ್ತಿದ್ದವರು ಅರೆಸ್ಟ್.!
– ಮಂಗಳೂರು: ಕುಖ್ಯಾತ ರೌಡಿ ತಲ್ಲತ್ ಸಿಸಿಬಿ ಬಲೆಗೆ
– ಬಂಟ್ವಾಳ: ಆಕಸ್ಮಿಕ ಬೆಂಕಿ – ಅಂಗಡಿ ಸುಟ್ಟು ಭಸ್ಮ
– ಸುಳ್ಯ:ಹಲ್ಲೆ ನಡೆಸಿ 3.5 ಲಕ್ಷ ದೋಚಿದ ಆಟೋ ಗ್ಯಾಂಗ್
NAMMUR EXPRESS NEWS
ಪಡುಬಿದ್ರಿ: ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಕನ್ನಡ ಭಾಷೆಯಲ್ಲಿ ಪರಿಚಯಿಸಿ ಕೆವೈಸಿ ಲಿಂಕ್ ಆಗಿಲ್ಲ ಒಟಿಪಿ ನೀಡಿ ಎಂದು ಕೇಳಿಕೆಯ ಮೇರೆಗೆ ಒಟಿಪಿ ನೀಡುತ್ತಿದಂತೆ ಮೂರು ಬಾರಿ ಖಾತೆಯಿಂದ ಹಣ ಡ್ರಾ ಆಗಿದ್ದು ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ತೆಂಕ ಎರ್ಮಾಳಿನಲ್ಲಿ ನಡೆದಿದೆ. ಎರ್ಮಾಳು ತೆಂಕ ಕಿನಾರ ಶಾಲೆಯ ಬಳಿಯ ನಿವಾಸಿ ಶಂಕರ್ ಎಂಬವರೇ ಹಣ ಕಳೆದುಕೊಂಡವರು. ಬಡಪಾಯಿ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ಇವರು ರಾತ್ರಿ ಹಗಲೆನ್ನದೆ, ಬಿಸಿಲು ಮಳೆಗೆ ಮೀನುಗಾರಿಕೆ ನಡೆಸಿ ಕೂಡಿಟ್ಟ ಹಣ ವಂಚಕರ ವಂಚನೆಯಿಂದ ಕಳೆದುಕೊಳ್ಳುವಂತ್ತಾಗಿದೆ. ಎಲ್ಲಾ ಮಾದ್ಯಮಗಳಲ್ಲೂ ಈ ಆನ್ಲೈನ್ ವಂಚನೆಯ ಬಗ್ಗೆ ಮೋಸ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆಯಾದರೂ ದಿನದಿಂದ ವಂಚನೆಗೊಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ಹಣ ಕಳೆದುಕೊಂಡ ಶಂಕರ್ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರದ ದಿಮ್ಮಿಗಳ ಸಾಗಾಟ: ಆರೋಪಿ ಅಂದರ್
ಉಪ್ಪಿನಂಗಡಿ: ನೆಲ್ಯಾಡಿಯ ಹೊಸಮಜಲು ಎನ್ನುವಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರದ ದಿಮ್ಮಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಆರೋಪಿಯನ್ನು ಲಾರಿ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಸಕಲೇಶಪುರದ ಆನಂಗಿ ಮನೆ ನಿವಾಸಿ ರಜಾಕ್ ಬಿನ್ ಅಬ್ಬಾಸ್ನನ್ನು ದಸ್ತಗಿರಿ ಮಾಡಿ ಆತ ಲಾರಿಯಲ್ಲಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ಸಿ.ಕೆ., ರಾವುತ್ತಪ್ಪ ಬಿರಾದಾರ್, ರಾಜೇಶ್ ಮತ್ತು ದಿನೇಶ್ ಭಾಗವಹಿಸಿದ್ದರು.
ಕುಖ್ಯಾತ ರೌಡಿ ತಲ್ಲತ್ ಸಿಸಿಬಿ ಬಲೆಗೆ
ಮಂಗಳೂರು: ನಗರದಲ್ಲಿ ಕೊಲೆಯತ್ನ, ಬೆದರಿಕೆ, ಹಣ ವಸೂಲಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪಡೀಲ್ ಫೈಸಲ್ ನಗರನಿವಾಸಿ ತಲ್ಲತ್ (39) ಬಂಧಿತ ಕುಖ್ಯಾತ ರೌಡಿ. ಗೋವಾ, ಮುಂಬೈನಲ್ಲಿದ್ದುಕೊಂಡೇ ರೌಡಿಸಂ ಲೋಕವನ್ನು ನಿಯಂತ್ರಿಸುತ್ತಿದ್ದ. ತಲ್ಲತ್ ಗ್ಯಾಂಗ್ ಲೀಡರ್ ಆಗಿದ್ದ ಎನ್ನಲಾಗಿದೆ. ಕಳೆದ 20 ವರ್ಷಗಳಿಂದ ತಲ್ಲತ್ ಮಂಗಳೂರಿನಲ್ಲಿ ಅಪರಾಧ ಎದುರಿಸುತ್ತಿದ್ದಾನೆ. ಇತ್ತೀಚೆಗೆ ತಲ್ಲತ್ ಮುಂಬೈನಿಂದ ಊರಿಗೆ ಬಂದಿದ್ದ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೊಟ್ಟಾರದಲ್ಲಿದ್ದಾಗ ಬಂಧಿಸಿದ್ದಾರೆ.
ಆಕಸ್ಮಿಕ ಬೆಂಕಿ: ಅಂಗಡಿ ಸುಟ್ಟು ಭಸ್ಮ
ಬಂಟ್ವಾಳ: ಆಕಸ್ಮಿಕವಾಗಿ ಬೆಂಕಿ ತಗುಲಿ ಇಲೆಕ್ಟ್ರಾನಿಕ್ ಅಂಗಡಿಯೊಂದು ಭಾಗಶ: ಬೆಂಕಿಗಾಹುತಿಯಾದ ಘಟನೆ ವೇಳೆ ಬಂಟ್ವಾಳ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ. ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿರುವ ಪುರಸಭಾ ವಾಣಿಜ್ಯ ಮಳಿಗೆಯೊಂದರಲ್ಲಿ ಅಗ್ನಿ ಆಕಸ್ಮಿಕ ಮಂಗಳವಾರ ಸಂಭವಿಸಿದ್ದು, ಹಲವು ಸೊತ್ತುಗಳು ಸುಟ್ಟುಹೋಗಿವೆ ಎಂದು ಹೇಳಲಾಗಿದೆ. ಬಳಿಕ ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಬೆಂಕಿ ನಂದಿಸುವಲ್ಲಿ ಸಫಲರಾದರು. ಅಂಗಡಿಯಲ್ಲಿದ್ದ ಸುಮಾರು ಲಕ್ಷಾಂತರ ರೂ.ಬೆಲೆಬಾಳುವ ಟಿ.ವಿ.ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳನ್ನು ಸುಟ್ಟು ಹೋಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಲ್ಲೆ ನಡೆಸಿ 3.5 ಲಕ್ಷ ದೋಚಿದ ಆಟೋ ಗ್ಯಾಂಗ್!
ಸುಳ್ಯ: ಬಾಡಿಗೆ ಆಟೋದಲ್ಲಿ ಬಂದು ಪ್ರಯಾಣಿಕನಿಗೆ ಹಲ್ಲೆ ನಡೆಸಿ ನಗದು, ಮೊಬೈಲ್ ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡದ ಸುಳ್ಯದ ಹಳೆಗೇಟು ಬಳಿ ಬುಧವಾರ ತಡರಾತ್ರಿ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾರುಗುಂದ ಗ್ರಾಮದ ನಿವಾಸಿ ದರ್ಶನ್ ದರೋಡೆಗೆ ಒಳಗಾದವರಾಗಿದ್ದಾರೆ. ದರ್ಶನ್ ವೈಯಕ್ತಿಕ ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದು, ರಾತ್ರಿ 11.15ರ ಸುಮಾರಿಗೆ ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳುವ ಉದ್ದೇಶದಿಂದ ಸುಳ್ಯ ಕಸಬಾ ಗ್ರಾಮದ ಹಳೆಗೇಟು ಎಂಬಲ್ಲಿ ರಸ್ತೆ ಬದಿ ಬಾಡಿಗೆ ವಾಹನಕ್ಕೆ ಕಾಯುತ್ತಿದ್ದರು. ಈ ವೇಳೆ ಆಟೋರಿಕ್ಷಾ ವೊಂದು ಆಗಮಿಸಿದ್ದು, ಅದರಲ್ಲಿ ಆಗಲೇ ಇಬ್ಬರು ಪ್ರಯಾಣಿಕರು ಹಿಂಬದಿ ಸೀಟಿನಲ್ಲಿ ಕೂತಿದ್ದರು.
ದರ್ಶನ್ ಅವರು ಆ ಅಟೋ ರಿಕ್ಷಾ ಹತ್ತಿದ್ದು, ಆಗ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ಅವರ ಕೈಯಲ್ಲಿದ್ದ ಬ್ಯಾಗ್ ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.ಇದನ್ನು ವಿರೋಧಿಸಿದಾಗ, ದುಷ್ಕರ್ಮಿಗಳು ದರ್ಶನ್ಗೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ಅವರನ್ನು ಮೂವರು ಸೇರಿ ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ. ಬ್ಯಾಗಿನಲ್ಲಿ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು, ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದವು. ಘಟನೆಯ ಸಮಯ ಅಟೋ ರಿಕ್ಷಾದ ನೋಂದಣಿ ಸಂಖ್ಯೆಯನ್ನು ಗಮನಿಸಲು ದರ್ಶನ್ ಗೆ ಸಾಧ್ಯವಾಗಿಲ್ಲ ಘಟನೆ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.