ಕಾವೇರಿದ ಕಾವೇರಿ ಕಿಚ್ಚು..!
– ಬೆಂಗಳೂರು, ಮಂಡ್ಯ, ಮೈಸೂರಲ್ಲಿ ಹೋರಾಟ
– ನಿರ್ಮಲಾನಂದ ಶ್ರೀ ಸಾಥ್: ನಾಳೆ ಮಂಡ್ಯ ಬಂದ್?
– ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
NAMMUR EXPRESS NEWS
ಬೆಂಗಳೂರು : 15 ದಿನಗಳವರೆಗೂ ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಇದೀಗ ಕರುನಾಡಲ್ಲಿ ಕಾವೇರಿ ಕಿಚ್ಚು ಹೆಚ್ಚಿದ್ದು, ಹಲವು ಸಂಘಟನೆಗಳು ತೀವ್ರ ಪ್ರತಿಭಟನೆಗೆ ಮುಂದಾಗಿದೆ. ಕರವೇ ವಿಧಾನ ಸೌಧ ಮುತ್ತಿಗೆಗೆ ಮುಂದಾಗಿದ್ದು ಪೊಲೀಸರು ತಡೆದಿದ್ದಾರೆ. ಈ ಬೆನ್ನಲ್ಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ಆಗದಂತೆ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. (ಸೆ.22) ಬೆಳಗ್ಗೆ 11 ಗಂಟೆಯ ನಂತರ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಿನ್ನಲೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರ ಭದ್ರತೆ ನಿಯೋಜಿಸಲಾಗಿದೆ.
ಶನಿವಾರ ಮಂಡ್ಯ ಬಂದ್!
ಮಂಡ್ಯ: ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಪ್ರಾಧಿಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ನಿಂದ ತಡೆಯಾಜ್ಞೆ ಸಿಗದಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ ಗುರುವಾರ ಜಿಲ್ಲೆಯ ವಿವಿಧೆಡೆ ಸಂಘಟನೆಗಳ ಮುಖಂಡರು ಬೀದಿಗಿಳಿದು ಪ್ರತಿಭಟಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಸೆ.23ರಂದು ಮಂಡ್ಯ ಜಿಲ್ಲಾ ಬಂದ್ಗೆ ಕರೆ ನೀಡಿದರು.
ನಿರ್ಮಲಾನಂದ ಶ್ರೀ ಸಾಥ್!
ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರಕಾರ ಮಧ್ಯಸ್ಥಿಕೆ ಮಾಡಬೇಕು. ರಾಜ್ಯ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಮಳೆ ಕಡಿಮೆ ಆದರೆ ಈ ಭಾಗದ ಕಥೆ ಏನು? ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀ ಹೇಳಿದ್ದಾರೆ.
ಮಂಡ್ಯದಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿ ಈ ಬಾರಿ ನೀರು ಕೊರತೆ ಇದೆ. ಬೆಳೆ ಹೋಗಲಿ ಜನರಿಗೆ ಕುಡಿಯುವ ನೀರಿಲ್ಲ. ಹಲವು ದಶಕಗಳಿಂದ ಈ ಸಮಸ್ಯೆ ಮುಗಿದಿಲ್ಲ. ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ. ಆದರೆ ರಾಜ್ಯಕ್ಕೆ ನ್ಯಾಯ ಸಿಗಬೇಕು ಎಂದರು.