ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ!
– ಸೆಪ್ಟೆಂಬರ್ 30ನೇ ತಾರೀಕು ಕೊನೆ ದಿನ
– ಯಾವ ಯಾವ ಯೋಜನೆಗೆ ಕಡ್ಡಾಯ… ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಬೆಂಗಳೂರು: ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶನದಂತೆ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಯಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ಸಿನಿ ಮತ್ತು ಮೈತ್ರಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಸಿಕ ಪಿಂಚಣಿ ವಿತರಣೆಯನ್ನು ಖಜಾನೆ-2 ತಂತ್ರಾಂಶದ ಮೂಲಕ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿಯಲ್ಲಿ ಫಲಾನುಭವಿಗಳ ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆಗೆ ನೇರವಾಗಿ ಜಮ ಮಾಡುವ ವ್ಯವಸ್ಥೆಯಡಿ ತರಲು ತೀರ್ಮಾನಿಸಲಾಗಿದ್ದು, ಈ ಯೋಜನೆಯಡಿ ಎಲ್ಲಾ ಪಿಂಚಣಿದಾರರು ಪಿಂಚಣಿ ಪಡೆಯುತ್ತಿರುವ ಪಿಂಚಣಿ ಪಾವತಿ, ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮತ್ತು ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ ನಿರ್ದೇಶಿಸಿರುತ್ತಾರೆ. ಎನ್.ಪಿ.ಸಿ.ಐ ಮ್ಯಾಪಿಂಗ್ ಎಂದರೆ ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿಸುವ ಪ್ರಕ್ರಿಯೆಯಾಗಿದೆ.
ನಿರ್ದಿಷ್ಟ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ ಆಯಾ ಬ್ಯಾಂಕ್ (ಅಂಚೆ ಖಾತೆಗೆ ನೇರ ಲಾಭ ವರ್ಗಾವಣೆಗೆ ಗ್ರಾಹಕರು ಒಪ್ಪಿಗೆ ನೀಡಿ ನೇರ ಪ್ರಯೋಜನಗಳನ್ನು ಪಡೆಯುವುದಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಈವರೆಗೆ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆ ಮಾಡಿಕೊಳ್ಳದಿದ್ದಲ್ಲಿ ಸೆಪ್ಟೆಂಬರ್ 30 ರ ಒಳಗಾಗಿ ಪಿಂಚಣಿ ಪಡೆಯಲು ಬ್ಯಾಂಕ್/ಅಂಚೆ ಖಾತೆ ಹೊಂದಿರುವ ಬ್ಯಾಂಕ್/ ಅಂಚೆ ಕಚೇರಿಗೆ ಸಂಪರ್ಕಿಸಿ ತಕ್ಷಣವೇ ಇ-ಕೆವೈಸಿ [ಆಧಾರ್ ಜೋಡಣೆ] ಪ್ರಕ್ರಿಯೆಯ ಜೊತೆಗೆ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಕೊಳ್ಳಬೇಕು.
ಈಗಾಗಲೇ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆಯಾಗಿದ್ದು, ಎನ್.ಪಿ.ಸಿ.ಐ ಮ್ಯಾಪಿಂಗ್ ಆಗಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಬ್ಯಾಂಕ್/ಅಂಚೆ ಕಛೇರಿಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆ/ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡದಿದ್ದಲ್ಲಿ ಪ್ರಸಕ್ತ ಸಾಲಿನ ಅಕ್ಟೋಬರ್ ಮಾಹೆಯಿಂದ ಪಿಂಚಣಿ ಪಾವತಿ ಸ್ಥಗಿತಗೊಳ್ಳುವುದು. ಆದ್ದರಿಂದ ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳು ಪಿಂಚಣಿ ಪಾವತಿ ಖಾತೆಗೆ ಆಧಾರ್ ಜೋಡಣೆಯನ್ನು ಕಡ್ಡಾಯವಾಗಿ ಮಾಡುವಂತೆ ಪ್ರಕಟಣೆ ತಿಳಿಸಿದೆ.