ದಸರಾ ಸಂಭ್ರಮಕ್ಕೂ ಬರದ ಕರಿ ನೆರಳು!
– ವಿಶ್ವ ವಿಖ್ಯಾತ ದಸರಾ ಈ ಸಲ ಸರಳ ಆಚರಣೆ
– ಅ.15ರಿಂದ 24 ರವರೆಗೆ ನಡೆಯಲಿರುವ ನಾಡ ಹಬ್ಬ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಾಗಿ ಬರದ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಸರಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ನಿರ್ಧಾರ ಮಾಡಿದ್ದು, ಈ ಸಲ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದೆ.
ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರ ಈ ಬಾರಿ ಸರಳ ದಸರಾವನ್ನು ಆಚರಿಸಲು ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಮಳೆಯ ಕಡಿಮೆಯಾಗಿರುವುದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಹೀಗಾಗಿ ಈ ಬಾರಿ ಸರಳ ಮತ್ತು ಅರ್ಥಪೂರ್ಣದಸರಾವನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ದಸರಾ ಆಚರಣೆಗೆಂದೇ 30 ಕೋಟಿ ರೂ. ನೀಡಲು ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೋರಿದ್ದರು. ಈಗ ಅಷ್ಟೊಂದು ಮೊತ್ತವನ್ನು ಪಡೆಯದೆ ಕಡಿಮೆ ವೆಚ್ಚದಲ್ಲಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮದ ನಂತರ ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಹುದು. ಜಂಬೂ ಸವಾರಿಗೂ ಅವಕಾಶ ಮಾಡಿಕೊಡಬಹುದು ಎನ್ನಲಾಗುತ್ತಿದೆ. ಮೈಸೂರು ದಸರಾ ಅಕ್ಟೋಬರ್ 15ರಿಂದ 24ರವರೆಗೆ ನಿಗದಿಯಾಗಿದೆ. ಅಕ್ಟೋಬರ್ 15ರಂದು ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಕೆಯೊಂದಿಗೆ ದಸರಾಗೆ ಚಾಲನೆ, ಅಕ್ಟೋಬರ್ 24ರಂದು ಜಂಬೂ ಸವಾರಿ ನಡೆಯಲಿದೆ.