– ಬಂಟ್ವಾಳ : ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು
– ಮಂಗಳೂರು: ಅಕ್ರಮ ಮರಳುಗಾರಿಕೆಗೆ ದಾಳಿ
– ವಿಟ್ಲ: 4 ವರ್ಷದ ಬಾಲಕಿ ಹೃದಯ ಸಂಬಂಧಿ ಖಾಯಿಲೆಯಿಂದ ಮೃತ್ಯು!
– ವಿಟ್ಲ: ಗಾಂಜಾ ಸೇವಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಯುವಕರು ಪೊಲೀಸರ ವಶಕ್ಕೆ
– ಮಣಿಪಾಲ: ಮಣಿಪಾಲ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಯುವತಿ ಸಹಿತ 6 ಮಂದಿ ವಶಕ್ಕೆ!
NAMMUR EXPRESS NEWS :
ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಸೆ.24ರ ಭಾನುವಾರ ಬೆಳಿಗ್ಗೆ ಪಾಣೆಮಂಗಳೂರು ನೂತನ ಸೇತುವೆಯಲ್ಲಿ ನಡೆದಿದೆ. ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ ಅವರ ಹಿರಿಯ ಮಗ ರಾಜ್ ಕುಮಾರ್ ಮೃತಪಟ್ಟ ದುರ್ದೈವಿ. ರಾಜ್ ಕುಮಾರ್ ಅವರು ವಾಮದಪದವು ಎಂಬಲ್ಲಿ ಜಾಗ ಖರೀದಿ ಮಾಡಿದ್ದು,ಕೃಷಿ ಮಾಡಿಕೊಂಡಿದ್ದರು. ವಾಮದಪದವಿನ ಮನೆಯಿಂದ ಸಜೀಪದಲ್ಲಿರು ಮೂಲ ಮನೆಗೆ ಬರುವ ವೇಳೆ ಎದುರಿನಿಂದ ಬಂದ ಪವಿತ್ರ ಕನ್ಸ್ ಟ್ರಕ್ಷನ್ ಗೆ ಸೇರಿದ ಲಾರಿ ಡಿಕ್ಕಿಯಾಗಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ರಮ ಮರಳುಗಾರಿಕೆಗೆ ದಾಳಿ: ಟಿಪ್ಪರ್, ದೋಣಿ ವಶ
ಮಂಗಳೂರು : ಮಂಗಳೂರಿನ ಅದ್ಧೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರ (ಪಲ್ಗುಣಿ) ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ಮಾಡಿ ಎರಡು ಟಿಪ್ಪರ್ ಲಾರಿಗಳು ಮತ್ತು 15 ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿದ್ದ ತಲಾ 5ಲಕ್ಷ ರೂ. ಮೌಲ್ಯದ ಎರಡು ಟಿಪ್ಪರ್ ಲಾರಿಗಳು, ತಲಾ 50 ಸಾವಿರ ರೂ. ಮೌಲ್ಯದ 15 ದೋಣಿಗಳು ಹಾಗೂ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಪರಿಕರಗಳು ಸೇರಿ ಒಟ್ಟು 17.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
4 ವರ್ಷದ ಬಾಲಕಿ ಹೃದಯ ಸಂಬಂಧಿ ಖಾಯಿಲೆಯಿಂದ ಮೃತ್ಯು
ವಿಟ್ಲ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ಗುರುತಿಸಲಾಗಿದೆ. ಪುತ್ತೂರಿನ ಮುರದಲ್ಲಿರುವ ಖಾಸಗಿ ಸ್ಕೂಲ್ ನ ಎಲ್.ಕೆ.ಜಿ.ಯಲ್ಲಿ ಕಲಿಯುತ್ತಿದ್ದ ಈಕೆ ಅನಾರೋಗ್ಯದ ಕಾರಣ ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮರಣ ಹೊಂದಿದ್ದಾಳೆ.
ಗಾಂಜಾ ಸೇವಿಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಯುವಕರು ಪೊಲೀಸರ ವಶಕ್ಕೆ
ವಿಟ್ಲ : ಕೆಲ ದಿನಗಳಿಂದ ಇಡಿದು ಗ್ರಾಮದ ಮುಂಡ್ರಬೈಲು ಎಂಬಲ್ಲಿ ಹದಿಹರೆಯದ ಯುವಕರ ತಂಡ ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಬಂದು ಗಾಂಜಾ ಮತ್ತು ಮಾದಕ ವಸ್ತುವನ್ನು ಸೇವಿಸುತ್ತಿದ್ದರು ಎಂಬ ಮಾಹಿತಿಯೊಂದು ಊರವರಿಗೆ ದೊರೆತಿದ ಅಲ್ಲದೇ ನಶೆಯಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಗೆ ತಿಳಿಸಿದ್ದರು. ಮಾಹಿತಿ ತಿಳಿದ ಗ್ರಾಮಸ್ಥರು ಕಾದು ಕುಳಿತಿದ್ದರು.
ಅದೇ ಸಮಯಕ್ಕೆ ಬಂದ ಯುವಕರು ಇನ್ನೇನು ತಮ್ಮ ಕೆಲಸ ಮಾಡಬೇಕೆನ್ನುವಷ್ಟರಲ್ಲಿ ಅವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಕಂಬಳಬೆಟ್ಟು ನೂಜಿ ನಿವಾಸಿಗಳಾದ ಸಾಹಿಲ್, ಶರ ಎನ್ನಲಾಗಿದೆ. ಆರೋಪಿಗಳಿಂದ 1ಬೈಕ್ ಹಾಗೂ 1ಸ್ಕೂಟರ್ನ್ನು ವಶಕ್ಕೆ ಪಡೆಯಲಾಗಿದೆ.
ಮಣಿಪಾಲ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಯುವತಿ ಸಹಿತ 6 ಮಂದಿ ವಶಕ್ಕೆ
ಮಣಿಪಾಲ: ಬಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯರಾತ್ರಿ ವೇಳೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಯುವತಿ ಸೇರಿದಂತೆ ಆರು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ವಶಕ್ಕೆ ಪಡೆದುಕೊಂಡವರನ್ನು ವಿನಾಯಕ, ಶಶಾಂಕ, ಆದರ್ಶ, ಶೈಲೇಶ, ಅರುಣ ಹಾಗೂ ಕಾವ್ಯ ಎಂದು ಗುರುತಿಸಲಾಗಿದೆ. ಇವರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡು, ಜಗಳ ಮಾಡಿ ಹೊಡೆದಾಡಿಕೊಳ್ಳುತ್ತಿದ್ದು, ಕೂಡಲೇ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.