ಬೆಳ್ತಂಗಡಿಯಲ್ಲಿ ನರ್ಸರಿಗೆ ನುಗ್ಗಿದ ಕಾಡಾನೆಗಳು..!
– 3,200ಕ್ಕಿಂತ ಅಧಿಕ ಗಿಡ ಆನೆಗಳು ತುಳಿದು ಹಾನಿ
ಪಡುಬಿದ್ರಿ: 3 ಲಕ್ಷ ಖಾತೆಯಿಂದ ಡ್ರಾ ಮಾಡಿ ವಂಚನೆ
– ಉಳ್ಳಾಲ : ಟಯರ್ ಸಿಡಿದ ಕಾರಣ ಮೀನು ಸಾಗಾಟದ ವಾಹನ ಪಲ್ಟಿ
– ಬಂಟ್ವಾಳ: ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ: ಸವಾರ ಸಾವು
– ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮ ಹತ್ಯೆ
NAMMUR EXPRESS NEWS
ಬೆಳ್ತಂಗಡಿ: ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ ಹೆಬ್ಬಲಸು, ಬಲಿಂದ್ರ, ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವಂಸಗೊಳಿಸಿವೆ. ಇನ್ನು ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದ್ದು, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ 20 ಮೀ. ಅಂತರದಲ್ಲಿದ್ದು, ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೋಡಿ, ಪರಿಶೀಲನೆ ನಡೆಸಿದ್ದಾರೆ
ಪಡುಬಿದ್ರಿ: 3 ಲಕ್ಷ ಖಾತೆಯಿಂದ ಡ್ರಾ ಮಾಡಿ ವಂಚನೆ
ಪಡುಬಿದ್ರಿ: ಶಂಕರಪುರದ ಕೆವೈಸಿ ಅಪ್ಲೇಟ್ ಮಾಡುವ ನೆಪದಲ್ಲಿ ವಲೆರಿಯನ್ ಎಂಬುವರ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿರುವ ಪ್ರಕರಣ ಶನಿವಾರ ನಡೆದಿದೆ. ವಲೆರಿಯನ್ ಕೆನರಾ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿದ್ದಾರೆ. ಅವರು ಶನಿವಾರ ಮನೆಯಲ್ಲಿರುವ ವೇಳೆ ಅಪರಿಚಿತನೋರ್ವ ಮೊಬೈಲ್ ಸಂಖ್ಯೆ 9387666481ರಿಂದ ವಲೇರಿಯನ್ ಪತ್ನಿ ಮೊಬೈಲಿಗೆ ಮೆಸೇಜ್ ಮಾಡಿ ತಾನು ಬ್ಯಾಂಕ್ ಉದ್ಯೋಗಿಯಾಗಿದ್ದು, ಖಾತೆಯ ಕೆವೈಸಿ ಅಪ್ಲೇಟ್ ಮಾಡಿಕೊಳ್ಳುವಂತೆ ತಿಳಿಸಿದ್ದ. ಅದರಂತೆ ಖಾತೆ ಪಾಸ್ ಬುಕ್ ವಿವರ ನೀಡಿದ್ದರು. ಅಪ್ಲೇಟ್ ಮಾಡುವ ಕಾರಣ ನಾಮಿನಿಯೂ ಆಗಿರುವ ಅವರಲ್ಲಿ ಖಾತೆದಾರರ ವಿವರ ಸಹಿತ ಎಟಿಎಂ ಕಾರ್ಡ್ ಮಾಹಿತಿ ಪಡೆದುಕೊಂಡಿದ್ದಾನೆ. ನಂತರ ಮೊಬೈಲ್ಗೆ ಒಟಿಪಿ ಬಂದಿದ್ದು, ಅದರ ವಿವರವನ್ನು ಪಡೆದುಕೊಂಡಿದ್ದ. ಬಳಿಕ ಅಕೌಂಟ್ನಿಂದ 1,99,999, 50,000, 80,000, 8200, ಸಹಿತ 3,38,199 ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಯರ್ ಸಿದು ಮೀನು ಸಾಗಾಟದ ವಾಹನ ಪಲ್ಟಿ
ಉಳ್ಳಾಲ: ಟಯರ್ ಸಿಡಿದು ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ಭಾನುವಾರ ವೇಳೆ ನಡೆದಿದೆ. ಸಂಜೆ ಘಟನೆಯಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸಂಚಾರದಲ್ಲಿ ವ್ಯತ್ಯಾಸ ಉಂಟಾದ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವಾಹನದಲ್ಲಿದ್ದ ಮೀನು ರಸ್ತೆ ಪೂರ್ತಿ ಚೆಲ್ಲಿಹೋಗಿದೆ.
ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಸವಾರ ಸಾವು
ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಲಾರಿಯೊಂದು ಅಪಾಯಕಾರಿ ರೀತಿಯಲ್ಲಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೂಲತಃ ಸಜೀಪಮೂಡ ಬೇಂಕ್ಯ ನಿವಾಸಿ, ಪ್ರಸ್ತುತ ವಾಮದಪದವಿನಲ್ಲಿ ನೆಲೆಸಿರುವ ರಾಜುಕುಮಾರ್ ಮಯ್ಯ (42) ಮೃತರು. ಅವರು ವಾಮದಪದವಿನಿಂದ ಬೇಂಕ್ಯಕ್ಕೆ ತೆರಳುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಾಜುಕುಮಾರ್ ಅವರನ್ನು ತತ್ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ
ಪುತ್ತೂರು: ಬನ್ನೂರು ಕರ್ಮಲ ಸನ್ನಿಧಿ ಲೇ ಔಟ್ ನಿವಾಸಿ ಕಿಶೋರ್ ಅವರ ಪುತ್ರಿ ಖಾಸಗಿ ಕಾಲೇಜಿನಲ್ಲಿ ಅಂತಿಮ ಬಿ.ಸಿ.ಎ. ವಿದ್ಯಾರ್ಥಿನಿ ಕೀರ್ತಿಕಾ (19) ಸೆ. 24ರಂದು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಸೀಲಿಂಗ್ ಫ್ಯಾನ್ಗೆ ಬೆಡ್ಶೀಟ್ ಸುತ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.