ಕರಾವಳಿಯಲ್ಲಿ ಸೈಬರ್ ಕಳ್ಳರ ಗ್ಯಾಂಗ್.. ಎಚ್ಚರ!
– ಪ್ರತಿ ದಿನ ಒಂದು ಕಡೆ ವಂಚನೆ: ಪೊಲೀಸರ ಮೌನ
– ಮಂಗಳೂರು ನಗರ ನೋಂದಣಿ ಕಚೇರಿಯಲ್ಲಿ ಸೈಬರ್ ವಂಚನೆ
-ಬಯೋಮೆಟ್ರಿಕ್ ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್ ಖಾತೆಗೆ ಕನ್ನ!
NAMMUR EXPRESS NEWS
ಮಂಗಳೂರು: ಕರಾವಳಿಯಲ್ಲಿ ಸೈಬರ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ದಿನಕ್ಕೊಂದು ಪ್ರಕರಣ ವರದಿ ಆಗುತ್ತಿದೆ. ಎಲ್ಲೋ ಹೊರ ಊರಲ್ಲಿ ಕುಳಿತು ಇಲ್ಲಿನ ಜನರಿಗೆ ವಂಚನೆ ಮಾಡಲಾಗುತ್ತಿದೆ. ಪ್ರತಿ ದಿನ ಒಂದು ಕಡೆ ವಂಚನೆ ನಡೆದರೂ ಪೊಲೀಸರ ಮೌನ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮದುವೆ, ಉದ್ಯಮ, ಓಟಿಪಿ, ಹೂಡಿಕೆ, ಚೈನ್ ಬ್ಯುಸಿನೆಸ್, ಜಾಬ್ ಹೀಗೆ ವಂಚಕರು ನೂರಾರು ಮಾರ್ಗ ಹಿಡಿದಿದ್ದಾರೆ. ಈ ನಡುವೆ ಮತ್ತೊಂದು ಬೃಹತ್ ವಂಚನೆ ಬಯಲಿಗೆ ಬಂದಿದೆ.
ಬಯೋಮೆಟ್ರಿಕ್ ನೀಡಿದ 100ಕ್ಕೂ ಅಧಿಕ ಮಂದಿಯ ಬ್ಯಾಂಕ್ ಖಾತೆಗೆ ಕನ್ನ!
ಜಾಗ, ಫ್ಲ್ಯಾಟ್ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪ ನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್ ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಇದರಿಂದ ಉದ್ಯಮಿಗಳು, ನಾಗರಿಕರು ಕಂಗಾಲಾಗಿ ಪೊಲೀಸ್ ಠಾಣೆ ಸುತ್ತುತ್ತಿದ್ದಾರೆ. ಒಂದು ತಿಂಗಳಿನಿಂದೀಚೆಗೆ ನೂರಾರು ಮಂದಿ ಜಾಗ ಮಾರಾಟ ಮತ್ತು ಖರೀದಿ ಮಾಡಿದ್ದು, ಇವರು ಬಯೋಮೆಟ್ರಿಕ್ ನೀಡಿದ 24 ಗಂಟೆಯೊಳಗೆ ಅವರ ಖಾತೆಯಿಂದ 10 ಸಾವಿರ ರೂ. ಡ್ರಾ ಮಾಡಲಾಗಿದೆ. ಸೈಬರ್ ವಂಚಕರು ತಮ್ಮ ವಂಚನಾ ಜಾಲಕ್ಕೆ ಹೊಸ ಹೊಸ ತಂತ್ರಗಾರಿಕೆ ಬಳಸುತ್ತಿದ್ದು, ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡದೆ ನೇರ ಮೈಕ್ರೋ ಕ್ಯಾಶ್ ಮೂಲಕ ಪಡೆಯುತ್ತಿದ್ದಾರೆ. ಇದರಿಂದ ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿದೆ.
ಒಟಿಪಿ, ಸಿವಿವಿ ಬೇಕಿಲ್ಲ!
ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಲು ಒಟಿಪಿ, ಸಿವಿವಿ, ಬ್ಯಾಂಕ್ ವಿವರ ಬೇಕಾಗಿಲ್ಲ. ಖಾತೆದಾರರು ಕೇವಲ ಆಧಾರ್ ಬಯೋಮೆಟ್ರಿಕ್ ಬಳಸಿದರೆ ವಂಚಕರು ಬ್ಯಾಂಕ್ ಖಾತೆಯಿಂದ ಮೈಕ್ರೋ ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಂಡು ವಂಚನೆ ಎಸಗುತ್ತಿರುವುದು ಬಯಲಾಗಿದೆ. ನೋಂದಣಿ ಕಚೇರಿಗೆ ಒಂದು ಬಾರಿ ಬಯೋಮೆಟ್ರಿಕ್ ಕೊಟ್ಟರೆ ಅದನ್ನೇ ಸೈಬರ್ ವಂಚಕರು ಮೈಕ್ರೋ ಎಟಿಎಂ ಮಾಲೀಕರಿಗೆ ನೀಡಿ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಮೈಕ್ರೋ ಎಟಿಎಂ ಮಾಲೀಕನಿಂದ ಸೈಬರ್ ವಂಚಕರು ಕ್ಯಾಶ್ ಮೂಲಕ ಹಣ ಪಡೆಯುತ್ತಿದ್ದಾರೆ. ಇಂತಹ ವಂಚನೆಗಳು ದೇಶಾದ್ಯಂತ ನಡೆಯುತ್ತಿದೆ.
ತನಿಖೆಗೆ ಪೊಲೀಸರ ನಿರ್ಲಕ್ಷ್ಯ!?
ಸೆ.16ರಂದು ಸೈಬರ್ ವಂಚನಾ ಪ್ರಕರಣ ಬಯಲಾಗುತ್ತಿದ್ದಂತೆ ಸೆನ್ ಠಾಣಾ ಪೊಲೀಸರು ರಿಜಿಸ್ಪ್ರೇಶನ್ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಆ ಬಳಿಕ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲಎನ್ನುತ್ತಾರೆ ಹಣ ವಂಚನೆಗೊಳಗಾದ ಸಂತ್ರಸ್ತರು.ನಗರದ ನೋಂದಣಿ ಕಚೇರಿಯಲ್ಲಿ ಬಯೋಮೆಟ್ರಿಕ್ ನೀಡಿದ ಹಲವರ ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿದ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಣವನ್ನು ವಂಚಕರು ಮೈಕ್ರೋ ಎಟಿಎಂ ಬಳಸಿ ಡ್ರಾ ಮಾಡಿರುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ.