ಕರಾವಳಿಯಲ್ಲಿ ಬಂದ್ ಬಿಸಿ ಇಲ್ಲ!
– ಸಂಘಟನೆಗಳಿಂದ ನೈತಿಕ ಬೆಂಬಲ: ಸಹಜ ಸ್ಥಿತಿಯಲ್ಲಿ ಕರಾವಳಿ ಜನಜೀವನ
– ಖಾಸಗಿ ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಣೆ
– ಶಾಲಾ ಕಾಲೇಜುಗಳಿಗೆ ರಜೆ ಇಲ್ಲ: ಅಲ್ಲಲ್ಲಿ ಪ್ರತಿಭಟನೆ
NAMMUR EXPRESS NEWS
ಉಡುಪಿ/ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿದ್ದರೂ ಸಹ ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ. ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ, ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿ ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಹಾಗಾಗಿ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆಯಾದರೂ ಕರಾವಳಿಯಲ್ಲಿ ನೈತಿಕ ಬೆಂಬಲ ಮಾತ್ರ ನೀಡಿದೆ ಹಾಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿವೆ.
ಶಾಲಾ ಕಾಲೇಜುಗಳಿಗೆ ರಜೆ ಇಲ್ಲ!
ಕಾವೇರಿ ನೀರಿನ ವಿಚಾರದಲ್ಲಿ ಕನ್ನಡ ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ್ದರೂ, ಕರಾವಳಿ ಭಾಗದಲ್ಲಿ ಇದರ ಬಿಸಿ ತಟ್ಟುವುದಿಲ್ಲ. ದಕ್ಷಿಣ ಕನ್ನಡ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.