ಮಂಗಳೂರಲ್ಲಿ ಅಕ್ಕ ತಂಗಿ ನೇಣಿಗೆ!
– ಕೌಟುಂಬಿಕ ವಿಚಾರಕ್ಕೆ ಮನನೊಂದು ವೃದ್ಧ ಸಹೋದರಿಯರ ಆತ್ಮಹತ್ಯೆ
– ವಿಟ್ಲ: ಹಿಂದೂ ಸಂಘಟನೆ ಪ್ರಮುಖನಿಗೆ ಗಡಿಪಾರು ನೋಟಿಸ್
– ಮಂಗಳೂರು : ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಹೃದಯಾಘಾತಕ್ಕೆ ಬಲಿ
– ಬಂಟ್ವಾಳ: ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಸಾವು
NAMMUR EXPRESS NEWS
ಮಂಗಳೂರು ನಗರದ ಕದ್ರಿ ಕಂಬದ ಬಳಿಯ ಚಂದ್ರಿಕಾ ಬಡಾವಣೆಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದ ವೃದ್ಧ ಅಕ್ಕ ತಂಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಘಟನೆ ಈಗ ಭಾರೀ ಕುತೂಹಲ ಮೂಡಿಸಿದೆ. ಲತಾ ಭಂಡಾರಿ(70) ಮತ್ತು ಅವರ ಅಕ್ಕ ಸುಂದರಿ ಶೆಟ್ಟಿ (80) ಮೃತ ಸೋದರಿಯರು. ಲತಾ ಭಂಡಾರಿ ಅವರ ಪತಿ ಜಗನ್ನಾಥ ಭಂಡಾರಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಮಂಗಳವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ 4.30ರ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಬಂದ್ ಆಗಿತ್ತು. ಕಿಟಕಿಯಿಂದ ನೋಡಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಇವರಿಗೆ ಮಕ್ಕಳಿರಲಿಲ್ಲ ಎನ್ನಲಾಗುತ್ತಿದ್ದು, ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಕದ್ರಿ ಪೊಲೀಸರು ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರಮುಖ್ ಅಕ್ಷಯ್ ರಜಪೂತ್ಗೆ ಗಡಿಪಾರು ನೋಟಿಸ್.
ವಿಟ್ಲ: ಹಲವಾರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅಕ್ಷಯ್ ರಜಪೂತ್ ಗೆ ಗಡಿಪಾರು ನೋಟಿಸ್ ನೀಡಲಾಗಿದೆ. ಕಲ್ಲಡ್ಕ ಬಾಳ್ತಿಲ ನಿವಾಸಿ ಅಕ್ಷಯ್ ರಜಪೂತ್ ಹಿಂದೂ ಜಾಗರಣಾ ವೇದಿಕೆಯ ಜವಾಬ್ದಾರಿಯನ್ನು ಹೊಂದಿದ್ದು ಇದೀಗ ಗಡಿಪಾರು ನೋಟೀಸ್ ನೀಡಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ಯುವಕರನ್ನು ಸೇರಿಸಿಕೊಂಡು ಗುಂಪುಗಾರಿಕೆ ನಡೆಸುವುದು, ಹಲ್ಲೆ ದೊಂಬಿ, ಮತೀಯ ಗಲಭೆಗಳನ್ನು ಸೃಷ್ಟಿಸಲು ಜೀವಬೆದರಿಕೆ ಹಾಕುವುದು, ನೈತಿಕ ಪೊಲೀಸ್ ಗಿರಿಯಂತಹ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದು ವಿಟ್ಲ ಪರಿಸರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಹಲವು ಬಾರಿ ಠಾಣೆಗೆ ಕರೆದು ಕಾನೂನು ತಿಳುವಳಿಕೆ ನೀಡಿದರೂ ಸಹ ತನ್ನ ಚಾಳಿ ಬಿಡದಿದ್ದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಈತನನ್ನು ಗಡಿಪಾರು ಮಾಡಿ ಎಂದು ಬಂಟ್ವಾಳ ಠಾಣೆಯ ಪೊಲೀಸ್ ಉಪ ಅಧೀಕ್ಷರಕರು ಪ್ರಸ್ತಾವನೆ ಸಲ್ಲಿಸಿದರಿಂದ ದಿನಾಂಕ 9.10,2023 ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮಂಗಳೂರು ಉಪವಿಭಾಗ ಇಲ್ಲಿಗೆ ಹಾಜರಾಗುವಂತೆ ಅಕ್ಷಯ್ ರಜಪೂತ್ಗೆ ನೋಟೀಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ ಹೃದಯಾಘಾತಕ್ಕೆ ಬಲಿ
ಮಂಗಳೂರು: ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸೋಮನ ಗೌಡ ಚೌದರಿ (31) ಮೃತ ದುರ್ದೈವಿಯಾಗಿದ್ದಾರೆ. ವಯರ್ ಲೆಸ್ ಇನ್ಸ್ಪೆಕ್ಟರ್ ವಾಹನಕ್ಕೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮನ ಗೌಡ ಮೂಲತಾ ಬಿಜಾಪುರ ಜಿಲ್ಲೆಯವರಾಗಿದ್ದಾರೆ. ಇನ್ಸ್ಪೆಕ್ಟರ್ಗೆ ಡೆಂಗ್ಯೂ ಜ್ವರ ಭಾದಿಸಿದ್ದರಿಂದ ನಗರದ ಫರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಮಂಗಳವಾರ ಬೆಳಿಗ್ಗೆ ಕರೆದುಕೊಂಡು ಹೋಗಿದ್ದರು.
ಅಧಿಕಾರಿಯನ್ನು ಆಸ್ಪತ್ರೆ ಬಳಿ ಇಳಿಸಿ ವಾಹನ ಪಾರ್ಕ್ ಮಾಡಲು ಹೋದ ಸಂದರ್ಭ ಸೋಮನಗೌಡ ಏಕಾಎಕಿ ಕುಸಿದು ಬಿದ್ದಿದ್ದಾರೆ ಕೂಡಲೇ ಸ್ಥಳೀಯರು ಧಾವಿಸಿ 112 ಗೆ ಕರೆ ಮಾಡಿ ವೆಸ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲು ಕೊಂಡುಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವಿವಾಹಿತರಾಗಿರುವ ಸೋಮನಗೌಡ ಕಳೆದ 7 ವರ್ಷಗಳಿಂದ ನಗರ ಸಶಸ್ತ್ರ ದಳದಲ್ಲಿ ಸೇವೆ ಸಲಿಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಸಾವು
ಬಂಟ್ವಾಳ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳದ ಕುರ್ನಾಡು ಎಂಬಲ್ಲಿ ನಡೆದಿದೆ. ಹೂವಿನಕೊಪ್ಪಲು ನಿವಾಸಿ ವಿಶ್ವನಾಥ (52) ಎಂಬುವವರು ಮೃತಪಟ್ಟ ವ್ಯಕ್ತಿ, ಅವರು ಚೇಳೂರು ಗ್ರಾಮದ ಬರೆ ಎಂಬಲ್ಲಿ ಮನೆಯೊಂದರ ಕೂಲಿ ಕೆಲಸಕ್ಕೆಂದು ಹೋಗಿದ್ದು, ಅಲ್ಲಿ ಅಡಿಕೆ ತೋಟಕ್ಕೆ ದನದ ಗೊಬ್ಬರವನ್ನು ಹಾಕುತ್ತಿದ್ದರು, ಸಂಜೆ ವೇಳೆಗೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೆಲಕ್ಕೆ ಕುಸಿದು ಬಿದ್ದು ಮೂರ್ಚೆ ಹೋಗಿದ್ದು, ಕೂಡಲೇ ಮಂಗಳೂರು ಕಣಚೂರು ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.