ರಾಜಧಾನಿಯಲ್ಲೂ ಕಂಬಳದ ಕೋಣಗಳ ಓಟ!
– ಕರಾವಳಿಯ ಸಂಸ್ಕೃತಿಯ ಅನಾವರಣಕ್ಕೆ ಸಿದ್ಧತೆ
– ಮೊದಲ ಬಾರಿಗೆ ನ.25,26 ರಂದು ಕಂಬಳ
– 5 ರಿಂದ 6 ಕೋಟಿ ವೆಚ್ಚದಲ್ಲಿ ಕಂಬಳ ಉತ್ಸವ
– ಟ್ರಕ್ ಮೂಲಕ ಕೋಣಗಳು ಮಂಗಳೂರಿನಿಂದ ಬೆಂಗಳೂರಿಗೆ
NAMMUR EXPRESS NEWS
ಮಂಗಳೂರು: ಕರಾವಳಿಯ ಸಂಸ್ಕೃತಿಯ ಅನಾವರಣಕ್ಕೆ ರಾಜಧಾನಿ ಬೆಂಗಳೂರಲ್ಲಿ ಸಿದ್ಧತೆ ಜೋರಾಗಿದೆ. ಈ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಬಳದ ಕೋಣಗಳ ಓಟ ಬೆಂಗಳೂರಲ್ಲಿ ನಡೆಯಲಿದೆ.
ಹೌದು. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊದಲ ಕಂಬಳ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜ್ಯರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ‘ಕಂಬಳ’ದ ಅನಾವರಣವಾಗಲಿದ್ದು ಸುಮಾರು 100 ರಿಂದ 130 ಕೋಣಗಳು ಮಂಗಳೂರಿನಿಂದ ಮೆರವಣಿಗೆಯಲ್ಲಿ ಸಾಗಲಿವೆ.
ಶನಿವಾರದಂದು ಕಂಬಳದ ಕೋಣಗಳ ಮಾಲಕರೊಂದಿಗೆ ಪ್ರಾಥಮಿಕ ಸಭೆ ನಡೆಸಿದ ಬಳಿಕ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉಡುಪಿ ಮತ್ತು ದ.ಕ ಜಿಲ್ಲೆಗಳ ಜಿಲ್ಲಾ ಕಂಬಳ ಸಮಿತಿಯು ಬೆಂಗಳೂರು ಕಂಬಳ ಸಮಿತಿಯ ಸಹಯೋಗದೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಸಲಿದೆ ಎಂದು ಹೇಳಿದ್ದಾರೆ.
ಕೋಣಗಳು ನ.23 ರಂದು ಟ್ರಕ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲಿವೆ. ಪ್ರಯಾಣಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು ಕೋಣಗಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ನಾಲ್ಕು ಗಂಟೆಗೆ ವಿರಾಮ, ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಪಶು ಸಂಜೀವಿನಿ ಆಂಬ್ಯುಲೆನ್ಸ್ ಮತ್ತು ನುರಿತ ಪಶು ವೈದ್ಯರ ವ್ಯವಸ್ಥೆ ಮಾಡಲಾಗುವುದು. ಹಾಸನದಲ್ಲಿ ನಿಲುಗಡೆ ನೀಡಲಾಗುವುದು. ಕಂಬಳವನ್ನು ಸುಪ್ರೀಂ ಕೋರ್ಟ್ ನ ನಿರ್ದೇಶನಗಳಿಗೆ ಅನುಗುಣವಾಗಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ತುಳುನಾಡು ಸಂಸ್ಕೃತಿ ಅನಾವರಣ
145 ಮೀ ಉದ್ದದ ಕಂಬಳ ಕೆರೆಯನ್ನು ನಿರ್ಮಾಣ ಮಾಡಲಾಗುವುದು. ಇಡೀ ಕಂಬಳೋತ್ಸವದ ವೆಚ್ಚ ಸುಮಾರು 5 ರಿಂದ 6 ಕೋಟಿ ಆಗಲಿದೆ. ಪ್ರಥಮ ಸ್ಥಾನಿ ಕೋಣಗಳಿಗೆ 2 ಸವರನ್ ಚಿನ್ನದ ನಾಣ್ಯ, ಎರಡನೇ ಸ್ಥಾನ ಪಡೆದ ಕೋಣಗಳಿಗೆ 1 ಸವರನ್ ಚಿನ್ನದ ನಾಣ್ಯ ಹಾಗೂ ಭಾಗವಹಿಸಿದ ಎಲ್ಲ ಕೋಣಗಳಿಗೆ ಪದಕಗಳನ್ನು ನೀಡಲಾಗುವುದು. ತುಳುನಾಡಿನ ಸಂಸ್ಕೃತಿಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ ವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ ನಟರು ಮುಂತಾದವರು ಭಾಗವಹಿಸಲಿದ್ದಾರೆ. ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಲೆ ಮತ್ತು ಆಹಾರೋತ್ಪನ್ನ ಮಳಿಗೆಗಳನ್ನು ಪ್ರದರ್ಶಿಸಲಾಗುತ್ತದೆ