ಚಿಕಿತ್ಸೆಗೆ ಹಣ ಇಲ್ಲದೆ ಅಜ್ಜಿಯ ಚಿನ್ನ ಸರ ಕದ್ದ!
ಮಲ್ಪೆ: ಬೋಟು ಮುಳುಗಡೆ..!
ಬಜಪೆ: ಗಾಂಜಾ ಸೇವನೆ ಮಾಡುತ್ತಿದ್ದ ಐವರ ಬಂಧನ
ಉಡುಪಿ: ವಯೋವೃದ್ಧೆಯ ಚಿನ್ನದ ಸರ ಸುಲಿಗೆ
ಕಾಪು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬೆಳ್ತಂಗಡಿ: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
NAMMUR EXPRESS NEWS
ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟದ ಬಳಿ ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟು ಗಾಳಿ ಮತ್ತು ನೀರಿನ ಒತ್ತಡಕ್ಕೆ ಮುಳುಗಿದ ಘಟನೆ ವಾರದ ಹಿಂದೆ ನಡೆದಿದ್ದು ವರದಿಯಾಗಿದೆ.ಕಲ್ಮಾಡಿಯ ಮಹಾಬಲ ಕುಂದರ್ ಅವರಿಗೆ ಸೇರಿದ ಅರ್ಚನಾ ಯಾಂತ್ರಿಕ ಬೋಟು ಮುಳುಗಡೆಗೊಂಡು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಗಾಂಜಾ ಸೇವನೆ ಮಾಡುತ್ತಿದ್ದ ಐವರ ಬಂಧನ
ಬಜಪೆ: ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯ ಕೆಂಜಾರು ಗ್ರಾಮದ ಪೋರ್ಕೊಡಿ, ಕೊಳಂಬೆ ಫನಾ ಕಾಲೇಜು ಬಳಿ ಹಾಗೂ ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಐವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪೋರ್ಕೊಡಿ ನಿವಾಸಿ ಮೊಹಮ್ಮದ್ ಮುನಾಜ್, ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಆಫ್ರಾ, ಬಡಗುಳಿಪಾಡಿ ಗ್ರಾಮದ ನಿವಾಸಿ ರಾಹಿಲ್ ಮೊಯಿದ್ದೀನ್ ಶರೀಫ್, ಮೂಡುಪೆರಾರ ಗ್ರಾಮದ ಗುರುಕಂಬಳದ ನಿವಾಸಿ ಮುಲ್ಲಾ ಅಬ್ದುಲ್ ಅಮನ್ ಮತ್ತು ಕಂದಾವರ ಗ್ರಾಮದ ಅಮಾನುಲ್ಲಾ ಕಂಪೌಂಡ್ ನಿವಾಸಿ ಮೊಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ.ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪರೀಕ್ಷಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುದರಿಂದ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಚಿನ್ನದ ಸರ ಸುಲಿಗೆ ಪ್ರಕರಣ: ಆರೋಪಿ ವಶಕ್ಕೆ
ಉಡುಪಿ: ವಯೋವೃದ್ಧೆಯ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲಿಗೆ ಮಾಡಿದ ಚಿನ್ನದ ಸರದೊಂದಿಗೆ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ. ಪೆರ್ಡೂರಿನ ಉಲ್ಲಾಸ್ ವಿಶ್ವನಾಥ್ ಶೆಟ್ಟಿ(48) ಬಂಧಿತ ಆರೋಪಿ, ಈತನಿಂದ 25 ಗ್ರಾಂ ತೂಕದ 88,000ರೂ. ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ನೆರೆಮನೆಯವಾಗಿದ್ದು, ಕೃತ್ಯ ನಡೆಸಿದ ದಿನದಂದು ವಯೋವೃದ್ಧೆಯೂ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವೇಳೆ ಹಿಂಬದಿಯಿಂದ ಬಂದು, ವೃದ್ಧೆಯ ಮುಖಕ್ಕೆ ಅವರದೇ ಸೀರೆಯ ಸೆರಗನ್ನು ಮುಸುಕು ಹಾಕಿ. ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ, ಈ ಕುರಿತಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿರುವ ಆರೋಪಿ, ಚಿಕಿತ್ಸೆ ಪಡೆಯುವ ಉದ್ದೇಶದಿಂದ ಹಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ತನಿಖೆ ವೇಳೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಕಾಪು: ಹತ್ತು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ಮುಂಬಯಿಯಲ್ಲಿ ಬಂಧಿಸಿ, ಕರೆ ತಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉದ್ಯಾವರ ಅಂಕುದ್ರು ನಿವಾಸಿ ಗಣೇಶ್ ಪೂಜಾರಿ (44) ಬಂಧಿತ ಆರೋಪಿ. 2013 ಮತ್ತು 2014ರಲ್ಲಿ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯು ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ವಾರಂಟ್ ಮತ್ತು ಪ್ರೋಕ್ಷಮೇಷನ್ ಹೊರಡಿಸಲಾಗಿತ್ತು.
ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಬೆಳ್ತಂಗಡಿ: ಪಣಕಜೆ ಸೋಣಂದೂರು ಮುಂಡಾಡಿ ನಿವಾಸಿ ಅವಿವಾಹಿತ ವಸಂತ ಮೂಲ್ಯ (42) ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಅ. 12ರಂದು ನಡೆದಿದೆ.ಅವರು ಸುಮಾರು 3 ವರ್ಷಗಳಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದು ಸ್ವಲ್ಪ ಮಾನಸಿಕ ಖಿನ್ನತೆಯಿಂದ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಜೀವನದಲ್ಲಿ ಮನನೊಂದು ಸೋಣಂದೂರು ಗ್ರಾಮದ, ಮುಂಡಾಡಿ ಜೀವಂದರ್ ಜೈನ್ ಅವರ ತೋಟದಲ್ಲಿರುವ ತೆರೆದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ಮುತ್ತಪ್ಪ ಮೂಲ್ಯ ಅವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.